ಮನೆ ಸ್ಥಳೀಯ 2ನೇ ಆಷಾಢ ಶುಕ್ರವಾರ: ನಾಡ ಅಧಿದೇವತೆಗೆ ನಾಗಲಕ್ಷ್ಮಿ ಅಲಂಕಾರ

2ನೇ ಆಷಾಢ ಶುಕ್ರವಾರ: ನಾಡ ಅಧಿದೇವತೆಗೆ ನಾಗಲಕ್ಷ್ಮಿ ಅಲಂಕಾರ

0

ಮೈಸೂರು: 2ನೇ ಆಷಾಢ ಶುಕ್ರವಾರದ ಹಿನ್ನೆಲೆ ನಾಡ ಅಧಿದೇವತೆಗೆ ನಾಗಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದಲೇ ನಾಡ ಅಧಿದೇವತೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂತು. ಇಂದು ಆಷಾಢ ಮಾಸದ 2ನೇ ಶುಕ್ರವಾರ ನಾಡ ಅಧಿದೇವತೆ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆದರು. ಬಳಿಕ ದೇವಾಲಯದ ಆವರಣದಲ್ಲಿ ಭಕ್ತರು ಪ್ರಸಾದ್‌ ಸೇವಿಸಿದರು.

Join Our Whatsapp Group

ದೇವಾಲಯದಲ್ಲಿ ವಿಶಿಷ್ಟ ಅಲಂಕಾರ: 2ನೇ ಆಷಾಢ ಶುಕ್ರವಾರದಂದು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ನಾಗಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಭಾಗದ ಆವರಣದಲ್ಲಿ ವಿವಿಧ ಬಗೆಯ ಹೂ, ತರಕಾರಿ ಹಾಗೂ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡಲಾಗಿತ್ತು. ಬೆಳಗ್ಗೆ 3.30 ರಿಂದಲೇ ದೇವಾಲಯದ ಒಳಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ನೆರೆವೇರಿಸಿದ ಬಳಿಕ 5.30 ಕ್ಕೆ ಬೆಳಗ್ಗೆ ದೇವಾಲಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು.

ರಾತ್ರಿ 10.30 ವರಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಆಷಾಢ ಮಾಸದಲ್ಲಿ ಶಕ್ತಿ ದೇವತೆ ಚಾಮುಂಡೇಶ್ವರಿಯನ್ನ ಪೂಜೆ ಮಾಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ನಂಬಿಕೆಯಿಂದ ಭಕ್ತರು ಆಷಾಢ ಮಾಸದಲ್ಲಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ನಾಡ ಅಧಿದೇವತೆ ಚಾಮುಂಡೇಶ್ವರಿ ಆಷಾಢ ಶುಕ್ರವಾರ ಹಾಗೂ ನವರಾತ್ರಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಿದ್ದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ ಎಂಬ ನಂಬಿಕೆಯಿಂದ ಜನರು ಹೆಚ್ಚಾಗಿ ಈ ಸಂದರ್ಭದಲ್ಲಿ ಶಕ್ತಿ ದೇವತೆ ಚಾಮುಂಡಿ ತಾಯಿಯ ದರ್ಶನ ಪಡೆಯಲು ವಾಡಿಕೆ ಎಂದು ಪ್ರಧಾನ ಅರ್ಚಕ ಡಾ. ಶಶಿ ಶೇಖರ್‌ ದಿಕ್ಷೀತ್‌ ಮಾಹಿತಿ ನೀಡಿದರು.

ಖಾಸಗಿ ವಾಹನಗಳ ನಿಷೇಧ: ಆಷಾಢ ಮಾಸದ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಖಾಸಗಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ಭಕ್ತರು ಚಾಮುಂಡಿ ಬೆಟ್ಟ ಕೆಳಭಾಗದಲ್ಲಿರುವ ಲಲಿತ ಮಹಲ್‌ ಮೈದಾನದಲ್ಲಿ ತಮ್ಮ ವಾಹನಗಳನ್ನ ಪಾರ್ಕಿಂಗ್‌ ಮಾಡಬೇಕು. ಅಲ್ಲಿಂದ ಸರ್ಕಾರಿ ಬಸ್​ಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಲ್ಲಿ ತಾಯಿಯ ದರ್ಶನ ಪಡೆದು ವಾಪಾಸ್‌ ಸರ್ಕಾರಿ ಬಸ್​ನಲ್ಲಿ ಬರಬೇಕು ಎಂಬ ನಿಯಮವನ್ನ ಜಿಲ್ಲಾಡಳಿತ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ದೇವಾಲಯದ ಸುತ್ತ – ಮುತ್ತ ಬಿಗಿಯಾದ ಪೋಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.