ಕಾರವಾರ: ಕಾರವಾರದಿಂದ 50 ನಾಟಿಕಲ್ ಮೈಲಿ ದೂರದ ಸಮುದ್ರದ ಮಧ್ಯೆದ ಕಂಟೇನರ್ ಸಾಗಿಸುತ್ತಿದ್ದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಹೆಲಿಕಾಪ್ಟರ್ ಹಾಗೂ ಇತರ ಹಡಗುಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಎಂ.ವಿ. ಮಾರ್ಸ್ಕ್ ಫ್ರಾಂಕ್ ಫರ್ಟ್ ಹೆಸರಿನ ಕಂಟೈನರ್ ಸಾಗಿಸುವ ಹಡಗು ಜು. 2ರಂದು ಮಲೇಷಿಯಾದಿಂದ ಹೊರಟಿತ್ತು. ಜು. 21ಕ್ಕೆ(ನಾಳೆ) ಶ್ರೀಲಂಕಾಗೆ ತಲುಪಬೇಕಿತ್ತು. ಆದರೆ, ಕಾರವಾರ ತೀರದ ಸಮುದ್ರ ಮಧ್ಯ ಇದ್ದಕ್ಕಿದ್ದಂತೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೇ, ಹಲವು ಕಂಟೇನರ್ಗಳಿಗೆ ಅಗ್ನಿ ಆವರಿಸಿದೆ.
ಈ ಅಗ್ನಿ ಅವಘಡದ ಬಗ್ಗೆ ಮುಂಬೈನ ಮೆರಿಟೈಮ್ ರೆಸ್ಜ್ಯೂ ಕೋಆರ್ಡಿನೇಶನ್ ಸೆಂಟರ್‌ಗೆ ಮಾಹಿತಿ ರವಾನೆಯಾಗಿದೆ. ಅಲ್ಲಿಂದ ಬಂದ ಸಂದೇಶದ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್‌ನ ಡಾರ್ನಿಯರ್ ಏರ್‌ಕ್ರಾಫ್ಟ್, ಸಚೇತ್, ಸುಜೀತ್, ಸಾಮ್ರಾಟ್ ಹೆಸರಿನ ಹಡಗುಗಳು ಹಾಗೂ ಒಂದು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
12 ಗಂಟೆಗಳಿಂದ ನಿರಂತರ ಕಾರ್ಯಾಚರಣೆ: ಭಾರತೀಯ ಕರಾವಳಿ ರಕ್ಷಣಾ ಪಡೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮಾರ್ಸ್ಕ್ ಫ್ರಾಂಕ್‌ಫರ್ಟ್ ಹಡಗಿನ ಬೆಂಕಿ ಅವಘಡ ಪ್ರಕರಣದಲ್ಲಿ ಕೋಸ್ಟ್ ಗಾರ್ಡ್ ಹಡಗುಗಳಾದ ಸುಜೀತ್, ಸಚೇತ್ ಮತ್ತು ಸಾಮ್ರಾಟ್ ಹಡಗುಗಳು 12 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿವೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಹಡಗು ಕಾರವಾರದಿಂದ ದಕ್ಷಿಣದಲ್ಲಿ 6.5 ನ್ಯಾನೋಮೀಟರ್ ದೂರದಲ್ಲಿ ತಲುಪಿತ್ತು. ಬೆಂಕಿ ಕಾಣಸಿಕೊಂಡ ಬಳಿಕ ಗೋವಾದ ಕೋಸ್ಟ್ ಗಾರ್ಡ್ ಡಾರ್ನಿಯರ್ ವಿಮಾನ ವೈಮಾನಿಕ ಕಾರ್ಯಾಚರಣೆ ನಡೆಸುತ್ತಿದೆ. ಕೊಚ್ಚಿಯಿಂದ ಹೆಚ್ಚುವರಿ ವಿಮಾನವನ್ನು ಹುಡುಕಾಟ ಮತ್ತು ಪಾರುಗಾಣಿಕಾ ವಿಮಾನವನ್ನೂ ನಿಯೋಜಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ವಿವರಿಸಿದೆ.