ಮನೆ ರಾಜ್ಯ ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ 2 ಹಂತದ ತಪಾಸಣೆ: ವಾರದೊಳಗೆ ಆದೇಶ ಹೊರಡಿಸಲು ಈಶ್ವರ ಖಂಡ್ರೆ...

ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ 2 ಹಂತದ ತಪಾಸಣೆ: ವಾರದೊಳಗೆ ಆದೇಶ ಹೊರಡಿಸಲು ಈಶ್ವರ ಖಂಡ್ರೆ ಸೂಚನೆ

0

ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶದೊಳಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ನೀರಿನ ಬಾಟಲಿ, ಚಮಚ, ಕ್ಯಾರಿಬ್ಯಾಗ್ ಇತ್ಯಾದಿ ತ್ಯಾಜ್ಯ ಹೋಗುತ್ತಿದ್ದು ಇದನ್ನು ವನ್ಯಮೃಗಗಳು ತಿನ್ನುವಂತಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಎರಡು ಹಂತದ ತಪಾಸಣೆಗೆ ನಿರ್ದೇಶನ ನೀಡಿದ್ದಾರೆ.

Join Our Whatsapp Group


ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಸೂಚನೆ ನೀಡಿರುವ ಸಚಿವರು, ಅರಣ್ಯದೊಳಗಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಸಾಗುವ ಕಾರು, ಬಸ್ ಇತ್ಯಾದಿಗಳಲ್ಲಿ ಪ್ರಯಾಣಿಸುವ ಪ್ರವಾಸಿಗರು / ಪ್ರಯಾಣಿಕರು ಬಳಸಿದ ನೀರಿನ ಬಾಟಲಿ, ಕ್ಯಾರಿಬ್ಯಾಗ್ ಅನ್ನು ಕಾಡಿನಲ್ಲಿ ಎಸೆಯುತ್ತಿದ್ದು, ನಾಗರಹೊಳೆ ಮತ್ತು ಬಂಡೀಪುರ ವಲಯದ ವನಪ್ರದೇಶದಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ವಾಹನ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಕಾಡಿನೊಳಗೆ ಸಿಬ್ಬಂದಿ ಇಳಿದು ತ್ಯಾಜ್ಯ ತೆಗೆಯುವಾಗ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆಯೂ ಇರುವ ಕಾರಣ ಪ್ಲಾಸ್ಟಿಕ್ ತ್ಯಾಜ್ಯ ವನ ಪ್ರದೇಶ ಪ್ರವೇಶಿಸದಂತೆ 2 ಹಂತದ ತಪಾಸಣೆಯ ವ್ಯವಸ್ಥೆ ಜಾರಿಗೆ ತರುವ ಅನಿವಾರ್ಯತೆ ಇದ್ದು, 7 ದಿನಗಳ ಒಳಗಾಗಿ ಈ ಸಂಬಂಧ ಸುತ್ತೋಲೆ ಅಥವಾ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.
ಮೊದಲ ಹಂತದಲ್ಲಿ ಬರುವ ಪ್ರವಾಸಿಗರು ಮತ್ತು ಪ್ರಯಾಣಿಕರಿಗೆ ಸ್ವಯಂಪ್ರೇರಿತವಾಗಿ ತಮ್ಮ ವಾಹನದಲ್ಲಿರುವ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನವನ್ನು ಅರಣ್ಯದ ಹೊರ ವಲಯದಲ್ಲಿ ಇಟ್ಟಿರುವ ಕಸದ ಬುಟ್ಟಿಗೆ ಹಾಕುವುದನ್ನು ಕಡ್ಡಾಯ ಮಾಡಬೇಕು. ಎರಡನೇ ಹಂತದಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಟೋಲ್ ಬಳಿ ತಪಾಸಣೆ ಮಾಡಬೇಕು, ಒಂದೊಮ್ಮೆ ವಾಹನಗಳಲ್ಲಿ, ಬಸ್ ಪ್ರಯಾಣಿಕರ ಬಳಿ ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ, ಕ್ಯಾರಿಬ್ಯಾಗ್, ಚಿಪ್ಸ್ ಪ್ಯಾಕೇಟ್ ಇತ್ಯಾದಿ ಕಂಡು ಬಂದರೆ ದಂಡ ಹಾಕುವ ವ್ಯವಸ್ಥೆ ಜಾರಿಗೆ ತಂದು ವನ ಮತ್ತು ವನ್ಯಮೃಗಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದ್ದಾರೆ.