ಶ್ರೀನಗರ: ಮಂಗಳವಾರ (ಜುಲೈ 23) ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಬಟ್ಟಲ್ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ತಡೆಯುವ ಯತ್ನ ಮಾಡಿದರೂ ಲೆಕ್ಕಿಸದೆ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ ಈ ವೇಳೆ ಸೇನೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದೆ ಉಗ್ರರೊಂದಿಗಿನ ಭಾರೀ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಯೋಧ ಗಾಯಗೊಂಡಿದ್ದಾರೆ. ಸದ್ಯ ಬತ್ತಲ್ ಸೆಕ್ಟರ್ ನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ವೈಟ್ ನೈಟ್ ಕಾರ್ಪ್ಸ್, “ಬೆಳಿಗ್ಗೆ 3.00 ಗಂಟೆಗೆ ಬಟ್ಟಲ್ ಸೆಕ್ಟರ್‌ನಲ್ಲಿ ನುಸುಳುಕೋರರ ತಂಡ ಗಡಿ ಭಾಗದಲ್ಲಿ ಒಳ ನುಸುಳಲು ಯತ್ನಿಸಿದ್ದು ಈ ವೇಳೆ ಗುಂಡಿನ ದಾಳಿ ನಡೆಸಿ ಒಳನುಸುಳುವ ಯತ್ನವನ್ನು ವಿಫಲಗೊಳಿಸಿದೆ. ಭಾರೀ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ನಡೆಯುತ್ತಿದೆ.” ಎಂದು ಟ್ವೀಟ್ ಮಾಡಿದ್ದಾರೆ.
24 ಗಂಟೆಗಳಲ್ಲಿ ಎರಡನೇ ಎನ್‌ಕೌಂಟರ್
ಸೋಮವಾರ (ಜುಲೈ 22) ರಜೌರಿ ಜಿಲ್ಲೆಯ ಮಿಲಿಟರಿ ಪೋಸ್ಟ್ ಅನ್ನು ಗುರಿಯಾಗಿಸಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಇದಾದ ಬಳಿಕ ಮಂಗಳವಾರ ಮುಂಜಾನೆ ಎರಡನೇ ಬಾರಿ ಗುಂಡಿನ ದಾಳಿ ನಡೆದಿದೆ.