ಮನೆ ಸ್ಥಳೀಯ ಮೈಸೂರು: ಜುಲೈ 25 ರಿಂದ ಆಗಸ್ಟ್ 25ರವರೆಗೆ ಗ್ರಾಹಕ ಎಕ್ಸ್‌ಪೋ ‘ಕರ್ನಾಟಕ ಸಂಭ್ರಮ-50’

ಮೈಸೂರು: ಜುಲೈ 25 ರಿಂದ ಆಗಸ್ಟ್ 25ರವರೆಗೆ ಗ್ರಾಹಕ ಎಕ್ಸ್‌ಪೋ ‘ಕರ್ನಾಟಕ ಸಂಭ್ರಮ-50’

0

ಮೈಸೂರು: ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಜುಲೈ 25 ರಿಂದ ಆಗಸ್ಟ್ 25ರವರೆಗೆ ಅತಿ ದೊಡ್ಡ ಗ್ರಾಹಕ ಎಕ್ಸ್‌ಪೋ ‘ಕರ್ನಾಟಕ ಸಂಭ್ರಮ-50’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಆಯೂಬ್ ಖಾನ್ ತಿಳಿಸಿದರು.

Join Our Whatsapp Group

ಇಂದು ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸಂಭ್ರಮ-50ರ ಸವಿನೆನಪಿಗಾಗಿ ಮೈಸೂರಿನಲ್ಲಿ ಮೊಟ್ಟಮೊದಲ ಬಾರಿಗೆ ಸೈಮನ್ ಎಕ್ಸಿಬಿಟರ್ಸ್ ದಸರಾ ವಸ್ತುಪ್ರದರ್ಶನದಲ್ಲಿ ಬೃಹತ್ ಗ್ರಾಹಕ ಮೇಳ ‘ಕರ್ನಾಟಕ ಸಂಭ್ರಮ 50’ ಆಯೋಜಿಸಿರುವುದಾಗಿ ತಿಳಿಸಿದರು.

1973ರ ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ ಸುವರ್ಣ ಮಹೋತ್ಸವದ ಅಂಗವಾಗಿ ಈ ಮೇಳ ಆಯೋಜಿಸಲಾಗಿದ್ದು, ಜುಲೈ 25 ರಿಂದ ಆಗಸ್ಟ್ 25ರವರೆಗೆ ನಡೆಯಲಿದೆ. ಗ್ರಾಹಕ ಮೇಳದ ಜೊತೆಗೆ ರಾಜ್ಯದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳು, ಕನ್ನಡ ಚಿತ್ರರಂಗ ಗಣ್ಯರು, ಕ್ರೀಡಾಪಟುಗಳು. ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ನಾಡಿನ ಹಲವು ಮಹನೀಯರ ಸಾಧನೆಗಳ ಮಾಹಿತಿಯನ್ನು ಕೂಡಾ ಇಲ್ಲಿ ಪ್ರದರ್ಶಿಸಲಾಗುತ್ತದೆ ಎಂದರು.

ಇದೇ ವೇಳೆ ಸೈಮನ್ ಎಕ್ಸಿಬಿಟರ್ಸ್‌’ನ ನಿರ್ದೇಶಕ ಎಂ.ಎಸ್.ನಾಗಚಂದ್ರ ಮಾತನಾಡಿ, ಜುಲೈ 25ರಿಂದ ಒಂದು ತಿಂಗಳ ಕಾಲ ನಡೆಯುವ ‘ಕರ್ನಾಟಕ ಸಂಭ್ರಮ 50’ ಗ್ರಾಹಕರ ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಇರುತ್ತವೆ. ಈ ಮೇಳವು ರೋಬೋಟಿಕ್ ಬಟರ್‌ ಪ್ರೈ, ಅನಿಮಲ್ ಕಿಂಗ್‌ಡಮ್, ಹಿಮಾಲಯನ್ ಅನಿಮಲ್ ಮತ್ತು ಅವತಾರ್ ಎಂಬ ನಾಲ್ಕು ಪರಿಕಲ್ಪನೆಗಳನ್ನು ಹೊಂದಿದೆ. ಇದರ ಜೊತೆಗೆ 1952 ರಿಂದ ಇಲ್ಲಿಯವರೆಗಿನ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಸಂಗ್ರಹಗಳು, ವಿವಿಧ ಕ್ರೀಡಾಪಟುಗಳು, ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಸೇರಿದಂತೆ ಶ್ರೇಷ್ಠ ಚಲನಚಿತ್ರ ನಟರ ಬಗ್ಗೆ ಮಾಹಿತಿ ಪ್ರದರ್ಶನ ಮಾಡಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಮಾಹಿತಿಯನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಮೂಲಕ ಈ ಮೇಳ ಕೇವಲ ವ್ಯಾಪಾರ ಅಷ್ಟೇ ಅಲ್ಲದೆ, ಜನರಿಗೆ ಜ್ಞಾನವನ್ನೂ ಒದಗಿಸಲಿದೆ. ರಾಜ್ಯದ ಕಲ್ಯಾಣಕ್ಕಾಗಿ ವಿವಿಧ ಕ್ಷೇತ್ರಗಳ ಜನರ ಕೊಡುಗೆಯನ್ನು ಇಲ್ಲಿ ತಿಳಿಯಬಹುದಾಗಿದೆ ಎಂದು ಹೇಳಿದರು.

ಒಂದೇ ಸೂರಿನಡಿ ಹಲವು ಉತ್ಪನ್ನ: ಡ್ರೆಸ್ ಮೆಟೀರಿಯಲ್ಸ್, ರೆಡಿಮೇಡ್ ಉಡುಪು, ಸೀರೆ, ಕುರ್ತಾ ಪೈಜಾಮಾ, ಶರ್ಟಿಂಗ್ ಮತ್ತು ಸೂಟಿಂಗ್ ಗಳತ್ತ ಗಮನಹರಿಸುವ ಜನರು ಎಕ್ಸ್ ಪೋಗೆ ಭೇಟಿ ನೀಡಲೇಬೇಕು ಎಂದು ನಾಗಚಂದ್ರ ತಿಳಿಸಿದ್ದಾರೆ.

ವ್ಯಾಪಕ ಶ್ರೇಣಿಯ ಮಸಾಲಾ ಪುಡಿಗಳು, ಜೇನುತುಪ್ಪ, ಚಾಕೊಲೇಟ್ ಗಳು, ಚಟ್ನ ಪುಡಿ, ಉಪ್ಪಿನಕಾಯಿ, ಒಣ ಹಣ್ಣುಗಳು ಸಹ ಮಾರಾಟಕ್ಕೆ ಇರುತ್ತವೆ. ಸಣ್ಣ ಕಂಪನಿಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ. ಇದಲ್ಲದೆ, ಮಕ್ಕಳು ಮತ್ತು ಹಿರಿಯರಿಗೆ ಮನೋರಂಜನಾ ಉದ್ಯಾನವನವು ಆಕರ್ಷಿಸಲಿದೆ. ಆಹಾರ ಪ್ರೇಮಿಗಳಿಗಾಗಿ ಫುಡ್ ಕೋರ್ಟ್ ಕೂಡಾ ಸ್ಥಾಪಿಸಲಾಗಿದೆ. ಪ್ರೇಕ್ಷಕರ ಮನರಂಜಿಸಲು ಪ್ರತಿದಿನ ವೇದಿಕೆ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗುತ್ತಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 9.30 ರವರೆಗೆ ಎಕ್ಸ್ ಪೋ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಮಾತನಾಡಿದರು.