ಹುಬ್ಬಳ್ಳಿ: ಅಫೀಮು ಮತ್ತು ಅಫೀಮು ಗಿಡದ ಪಾವಡರ್ ಪೊಪೆಸ್ಟ್ರಾ ಹೆಸರಿನ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಐವರನ್ನು ಕಸಬಾಪೇಟೆ ಪೊಲೀಸರು ಬಂಧಿಸಿ, ಅವರಿಂದ 150ಗ್ರಾಂ ಅಫೀಮು ಮತ್ತು 3ಕೆಜಿ ಅಫೀಮು ಗಿಡದ ಪೌಡರ್ ಪೊಪೆಸ್ಟ್ರಾ ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ರಾಜಸ್ಥಾನ ಮೂಲದವರಾದ ಶಿವಮೊಗ್ಗದ ಜುಗತರಾಮ ಪಟೇಲ್ , ಹೀಮಾ ಬಿಷ್ಣೋಯ್, ದನರಾಮ ಪಟೇಲ್, ಶ್ರವಣಕುಮಾರ ಬಿಷ್ಣೋಯ್, ಓಂಪ್ರಕಾಶ ಬಿಷ್ಣೋಯ್ ಬಂಧಿತರು ಎಂದು ತಿಳಿಸಿದರು.
ಖಚಿತ ಮಾಹಿತಿ ಮೇರೆಗೆ ನಗರದ ಗಬ್ಬೂರ ವೃತ್ತ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಐವರಿಂದ 1.15ಲಕ್ಷ ರೂ. ಮೌಲ್ಯದ ಅಫೀಮು ಮತ್ತು ಅಫೀಮು ಗಿಡದ ಪೌಡರ್ ಪೊಪೆಸ್ಟ್ರಾ, ಐದು ಮೊಬೈಲ್ ಫೋನ್ಸ್, 1,250ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಈ ಜಾಲವು ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ಹಾಗೂ ವರ್ತಕರು, ಜನರನ್ನು ಕೇಂದ್ರೀಕೃತವಾಗಿಸಿ ಮಾರಾಟ ಮಾಡುತ್ತಿದ್ದರು. ಇವರು ಹುಬ್ಬಳ್ಳಿ, ಶಿವಮೊಗ್ಗ, ಶಿರಸಿ ಹಾಗೂ ಕುಮಟಾದಲ್ಲಿ ವಿವಿಧ ತರಹದ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಜಸ್ಥಾನದವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಇವರು, ಅಲ್ಲಿಂದಲೇ ಮಾದಕವಸ್ತು ತೆಗೆದುಕೊಂಡು ಬಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಬೆಳಗ್ಗೆ ಅದನ್ನು ನೀರಿನಲ್ಲಿ ಹಾಕಿಕೊಂಡು ಕುಡಿದರೆ ಶಕ್ತಿ ಬರುತ್ತದೆ. ಇದು ಡ್ರಗ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.