ಮನೆ ರಾಜ್ಯ 2 ವರ್ಷಗಳ ನಂತರ ಕೆಆರ್‌ಎಸ್‌ ಜಲಾಶಯ ಭರ್ತಿ

2 ವರ್ಷಗಳ ನಂತರ ಕೆಆರ್‌ಎಸ್‌ ಜಲಾಶಯ ಭರ್ತಿ

0

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯು ಎರಡು ವರ್ಷಗಳ ಬಳಿಕ ಬುಧವಾರ ಸಂಜೆ ವೇಳೆಗೆ ಭರ್ತಿಯಾಗಿದೆ.

Join Our Whatsapp Group


ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗೆ ನೀರು ತಲುಪಿದೆ. ಜಲಾಶಯದಲ್ಲಿ ಪ್ರಸಕ್ತ 49.452 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕೆಆರ್​ಎಸ್​ ಡ್ಯಾಂ ತುಂಬಿರುವುದು ರಾಜ್ಯದ ಜನತೆಯ ಪಾಲಿಗೆ ಅದರಲ್ಲೂ ಬೆಂಗಳೂರಿನ ಜನತೆಗೆ ಇದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ. ಏಕೆಂದರೆ, ಕಳೆದ ವರ್ಷ ಹನಿ ಹನಿ ನೀರಿಗೂ ರಾಜ್ಯ ರಾಜಧಾನಿ ಜನರು ಪರದಾಡಿದ್ದರು. ಎಷ್ಟೋ ಮಂದಿ ನೀರಿಲ್ಲದೆ ಬೆಂಗಳೂರನ್ನೇ ತೊರೆದಿದ್ದರು. ಕಾವೇರಿ ನೀರಿನಲ್ಲಿ ವಾಹನಗಳನ್ನು ಸ್ವಚ್ಛಗೊಳಿಸಿದ್ದಕ್ಕೆ ಬಿಬಿಎಂಪಿ ದಂಡ ವಿಧಿಸಿದ್ದನ್ನು ಮರೆಯುವಂತಿಲ್ಲ. ಒಂದು ಬಿಂದಿಗೆ ನೀರಿಗೂ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಕಳೆದ ಬೇಸಿಗೆಯಲ್ಲಿ ಎದುರಾಗಿತ್ತು. ಆದರೆ, ಈ ಬಾರಿ ವರುಣ ಕೃಪೆ ತೋರಿದ್ದು, ಕೆಆರ್​ಎಸ್​ ಡ್ಯಾಂಗೆ ಮತ್ತೆ ಜೀವಕಳೆ ಬಂದಿದೆ. ಅಲ್ಲದೆ, ರೈತರ ಮುಖದಲ್ಲೂ ಮಂದಹಾಸ ಮೂಡಿದೆ.
ಬರದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ್ದಕ್ಕೆ ಕೆಲವು ತಿಂಗಳುಗಳು ಹಿಂದೆ ರೈತರು ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಯನ್ನು ನಡೆಸಿದ್ದರು. ಬೆಳೆಗೆ ನೀರಿಲ್ಲದೆ ಕಾವೇರಿ ಜಲಾನಯನ ಪ್ರದೇಶದ ರೈತರು ಮೋಡದ ಕಡೆ ಮುಖ ಮಾಡಿ ಯಾವಾಗ ಮಳೆ ಬರುತ್ತದೆ ಎಂದು ಎದುರು ನೋಡುತ್ತಿದ್ದರು. ಆದರೆ, ವರುಣ ತನ್ನ ಮುನಿಸನ್ನು ದೂರ ಮಾಡಿದ್ದು, ಮತ್ತೆ ಕೃಪೆ ತೋರಿದ್ದಾನೆ. ಭಾರಿ ಮಳೆಯಿಂದ ಕೆಆರ್​ಎಸ್​ ಡ್ಯಾಂ ತುಂಬಿದ್ದು ಜನರ ನೀರಿನ ಬವಣೆ ನೀಗಿದೆ.