ಮನೆ ಅಪರಾಧ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಆಸ್ತಿ ಕಬಳಿಕೆ: ಗಂಭೀರ ಆರೋಪ

ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಆಸ್ತಿ ಕಬಳಿಕೆ: ಗಂಭೀರ ಆರೋಪ

0

ಮಂಡ್ಯ: ಜಿಲ್ಲೆಯ ಪಾಂಡವಪುರದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ನೂರಾರು ಕೋಟಿ ಆಸ್ತಿ ಕಬಳಿಸಲು ಸಂಚು ಹಾಕಲಾಗಿದ್ದು, ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಅವರು ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಭೂಗಳ್ಳರಿಗೆ ಅಕ್ರಮ ಪರಭಾರೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

Join Our Whatsapp Group

ಈ ಬಗ್ಗೆ ಚೆಲುವನಾರಾಯಣ ಸ್ವಾಮಿಯ ಭಕ್ತರಾಗಿರುವ ರವಿಕುಮಾರ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಸ್ನೇಹಿತರಾದ ಕಂಟ್ರ್ಯಾಕ್ಟರ್ ಸತೀಶ್‌ಬಾಬು ರೆಡ್ಡಿಗೆ ಭೂಮಿ ಕೊಡಿಸಲು ಯತ್ನ ನಡೆದಿದೆ ಎಂದು ರವಿಕುಮಾರ್ ಅವರು ಆರೋಪ ಮಾಡಿದ್ದಾರೆ. ಮೈಸೂರಿನ ಕೆಸರೆ ಗ್ರಾಮ ವ್ಯಾಪ್ತಿಯಲ್ಲಿ 21.5 ಎಕರೆ ಭೂಮಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕೆಸರೆ ಗ್ರಾಮದ ಸರ್ವೆ ನಂಬರ್ 396, 397, 398 ಹಾಗೂ 399ಕ್ಕೆ ಸೇರಿದ ಭೂಮಿಯನ್ನು ಮಂಡ್ಯ ಜಿಲ್ಲೆ ನಗುವಿನಹಳ್ಳಿ ಗ್ರಾಮದ ಗೋಸೇಗೌಡ ಕುಟುಂಬ ದೇಗುಲಕ್ಕೆ ದೇಣಿಗೆಯಾಗಿ ನೀಡಿತ್ತು. ಆದರೆ ದೇವಾಲಯಕ್ಕೆ ಸೇರಿದ ಈ ಜಮೀನನ್ನು ಅನ್ಯರಿಗೆ ಪರಭಾರೆ ಮಾಡುವಲ್ಲಿ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಮೀನನ್ನ ಮತ್ತೆ ದೇವಾಲಯದ ಹೆಸರಿಗೆ ವರ್ಗಾಯಿಸುವಂತೆ ದೂರುದಾರ ರವಿಕುಮಾರ್ ಆಗ್ರಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ರವಿಕುಮಾರ್, ಮೇಲುಕೋಟೆ ದೇವಸ್ಥಾನದ ಆಸ್ತಿಯನ್ನು ಪುನರ್ ಸ್ಥಾಪಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಮಂಡ್ಯ ಜಿಲ್ಲಾಡಳಿತ ದಾಖಲೆ ಪರಿಶೀಲನೆ ನಡೆಸಿದೆ. ದೇವಾಲಯದ ಆಸ್ತಿಯನ್ನ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಕಾನೂನು ಪ್ರಕಾರ ಸರಿಯಲ್ಲ. ಪ್ರಕರಣ ಎಸಿ ಕೋರ್ಟ್‌ನಲ್ಲಿ ಇರುವಾಗಲೇ ಖಾಸಗಿಯವರಿಗೆ ಮಾಡಿಕೊಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.