ಮನೆ ಕಾನೂನು ಪರಶುರಾಮ ಥೀಮ್‌ ಪಾರ್ಕ್ ಪ್ರಕರಣ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅಮಾನತು‌

ಪರಶುರಾಮ ಥೀಮ್‌ ಪಾರ್ಕ್ ಪ್ರಕರಣ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅಮಾನತು‌

0

ಉಡುಪಿ: ಕಾರ್ಕಳ ತಾಲೂಕು ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್  ಕಾಮಗಾರಿ ಲೋಪಕ್ಕೆ ಸಂಬಂಧಿಸಿದಂತೆ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತು ಮಾಡಿ ಉ‌ಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

Join Our Whatsapp Group

ಪ್ರಕರಣ ಸದ್ಯ ತನಿಖಾ ಹಂತದಲ್ಲಿದ್ದು, ಅರುಣ್ ಕುಮಾರ್ ಅವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವ ಕಾರಣದಿಂದ ಅವರನ್ನು ಅಮಾನತು ಮಾಡಲಾಗಿದೆ. ಇವರ ಸ್ಥಾನಕ್ಕೆ ಸಹಾಯಕ ಯೋಜನಾ ನಿರ್ದೇಶಕ ಪಿ.ದಿವಾಕರ್ ಅವರನ್ನು ನೇಮಿಸಲಾಗಿದೆ.

ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಪರಶುರಾಮ ಥೀಮ್‌ ಪಾರ್ಕ್ ಕಾಮಗಾರಿ ಪೂರ್ಣಗೊಳಿಸದೆ, ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದೆ ಉದ್ಘಾಟನೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಅಲ್ಲದೆ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಆರೋಪಗಳಿದ್ದು, ಸದ್ಯ ಈ ಪ್ರಕರಣದ ಬಗ್ಗೆ ಸಿ.ಒ.ಡಿ ಮತ್ತು ನ್ಯಾ ಎಚ್ ಎನ್ ನಾಗಮೋಹನ್ ದಾಸ್ ವಿಚಾರಣ ಆಯೋಗ ತನಿಖೆ ನಡೆಸುತ್ತಿದೆ.

ಕೆಲ ದಿನಗಳ ಹಿಂದೆ ವಿಧಾನಸೌಧದ ಮುಂಭಾಗದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು.

ಜನಾಭಿಪ್ರಾಯಕ್ಕೆ ಸಂದ ಜಯ: ಜಿಲ್ಲಾಡಳಿತವು ಉಡುಪಿಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯವರನ್ನು ಅಮಾನತ್ತು ಮಾಡಿರುವುದು ಕಾರ್ಕಳ ತಾಲೂಕಿನ ಜನಾಭಿಪ್ರಾಯಕ್ಕೆ ಸಂದ ಜಯ ಎಂದು ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಲ್ಲೂರು ಕೃಷ್ಣ ಶೆಟ್ಟಿ ಹೇಳಿದ್ದಾರೆ.