ಮನೆ ರಾಜ್ಯ ತುಂಗಭದ್ರಾ ಜಲಾಶಯ ಭರ್ತಿಗೆ 1 ಅಡಿ ಬಾಕಿ: 35,444 ಕ್ಯುಸೆಕ್‌ ನೀರು ನದಿಗೆ

ತುಂಗಭದ್ರಾ ಜಲಾಶಯ ಭರ್ತಿಗೆ 1 ಅಡಿ ಬಾಕಿ: 35,444 ಕ್ಯುಸೆಕ್‌ ನೀರು ನದಿಗೆ

0

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು ಒಂದು ಅಡಿಯಷ್ಟೇ ಬಾಕಿ ಇದ್ದು, ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ನಿರೀಕ್ಷೆ ಇದೆ. ಜಲಾಶಯದಲ್ಲಿ 101.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 89,400 ಕ್ಯುಸೆಕ್‌ ನಷ್ಟು ಇರುವ ಕಾರಣ ಗುರುವಾರ ಬೆಳಿಗ್ಗೆ ಮತ್ತೆರಡು ಕ್ರಸ್ಟ್‌ ಗೇಟ್‌ ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಯಿತು.

Join Our Whatsapp Group

 ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ ಒಳಹರಿವಿನ ಪ್ರಮಾಣ 75 ಸಾವಿರ ಕ್ಯುಸೆಕ್‌ ನಷ್ಟಿತ್ತು. ಹೀಗಾಗಿ 10 ಗೇಟ್‌ಗಳಿಂದ 22,245 ಕ್ಯುಸೆಕ್‌ ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಆದರೆ ಬಳಿಕ ಒಳಹರಿವಿನ ಪ್ರಮಾಣ ಹೆಚ್ಚಿ 89,400 ಕ್ಯುಸೆಕ್‌ನಷ್ಟಾಯಿತು. ಹೀಗಾಗಿ ಮತ್ತೆ ಎರಡು ಕ್ರಸ್ಟ್‌ಗೇಟ್‌ಗಳನ್ನು ತೆರೆಯುವುದರ ಮೂಲಕ ಒಟ್ಟು 12 ಗೇಟ್‌ಗಳಿಂದ 35,400 ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಯಿತು. ಜತೆಗೆ ಕಾಲುವೆಗಳಿಗೆ ಹರಿಯುವ ನೀರು ಸೇರಿ 39,956 ಕ್ಯುಸೆಕ್‌ನಷ್ಟು ನೀರಿನ ಹೊರಹರಿವು ಸದ್ಯ ಆಗುತ್ತಿದೆ.

 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿಯಾಗಲು ಇನ್ನು ನಾಲ್ಕು ಟಿಎಂಸಿ ಅಡಿಯಷ್ಟೇ ಬೇಕಿದೆ. ಒಳಹರಿನ ಪ್ರಮಾಣ ಅಧಿಕವಾಗಿರುವುದರಿಂದ ಮಧ್ಯಾಹದ ವೇಳೆಗೆ ಜಲಾಶಯ ತನ್ನ ಗರಿಷ್ಠ ಮಟ್ಟ ತಲುಪುವುದು ನಿಶ್ಚಿತವಾಗಿದೆ.

 ತುಂಗಾ ನದಿ ಮತ್ತು ವರದಾ ನದಿಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹೊರ ಹರಿವಿನ ಪ್ರಮಾಣವನ್ನು ಯಾವುದೇ ಕ್ಷಣದಲ್ಲಿ 50 ಸಾವಿರ ಕ್ಯುಸೆಕ್‌ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ನದಿ ತೀರದ ಜನರು ಎಚ್ಚರದಿಂದ ಇರಬೇಕು’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತುರ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಳಹರಿವಿನ ಪ್ರಮಾಣ ನೋಡಿಕೊಂಡು ವೈಜ್ಞಾನಿಕವಾಗಿ ನೀರು ಹೊರಹರಿಸುವ ಕಾರ್ಯವನ್ನು ತುಂಗಭದ್ರಾ ಅಣೆಕಟ್ಟೆಯಲ್ಲಿ ನಡೆಸಲಾಗುತ್ತಿದ್ದು, ಬುಧವಾರದವರೆಗೆ 10 ಕ್ರಸ್ಟ್‌ಗೇಟ್‌ಗಳನ್ನು 1 ಅಡಿಯಷ್ಟು ಮಾತ್ರ ತೆರೆದು ನೀರನ್ನು ಹೊರಹಾಕಲಾಗುತ್ತಿತ್ತು. ಒಳಹರಿವು ಜಾಸ್ತಿಯಾದಂತೆ ಅದನ್ನು 1.50 ಅಡಿಯಷ್ಟು ಹೆಚ್ಚಿಸಲಾಗಿತ್ತು. ಗುರುವಾರ ಬೆಳಿಗ್ಗೆ 10 ಗಂಟೆಗೆ ಇನ್ನೆರಡು ಗೇಟ್‌ಗಳನ್ನು ತೆರೆದುದು ಮಾತ್ರವಲ್ಲದೆ, ಎಲ್ಲಾ 12 ಗೇಟ್‌ಗಳನ್ನೂ 2 ಅಡಿಯಷ್ಟು ಎತ್ತರಿಸಿ ನೀರನ್ನು ಹೊರಬಿಡಲಾಗುತ್ತಿದೆ.

ಅಣೆಕಟ್ಟೆ ತುಂಬಲು ಇನ್ನೇನು 5 ಅಡಿ ಬಾಕಿ ಇದೆ ಎಂದಾಗ ಜುಲೈ 22ರಂದು ಸಂಜೆ 5 ಗಂಟೆಗೆ ಮೂರು  ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗಿತ್ತು. 24ರಂದು ಸಂಜೆ 4 ಗಂಟೆಗೆ ಮತ್ತೆ ಏಳು ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಯಿತು. ಗುರುವಾರ ಈ ಸಾಲಿಗೆ ಮತ್ತೆರಡು ಗೇಟ್‌ ಗಳು ಸೇರ್ಪಡೆಯಾಗಿವೆ.

ತುಂಗಭದ್ರಾ ನದಿಯ ಪಾತ್ರಗಳಲ್ಲಿ ಹಾಗೂ ನದಿ ಹರಿದು ಹೋಗುವ ಹಂಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲೂ ಪ್ರವಾಹ ಸ್ಥಿತಿ ಇಲ್ಲ. ಹೀಗಿದ್ದರೂ ಜನರು ನದಿ ನೀರಿನ ವಿಚಾರದಲ್ಲಿ ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.