ಮನೆ ಅಪರಾಧ ಹುಬ್ಬಳ್ಳಿ: ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಹುಬ್ಬಳ್ಳಿ: ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

0

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ರಮೇಶ ಭವನ ಬಳಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ಅಂತಾರಾಜ್ಯ ದರೋಡೆಕೋರನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ದರೋಡೆಕೋರ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಗಾಮನಗಟ್ಟಿ ರಸ್ತೆ ತಾರಿಹಾಳ ಕ್ರಾಸ್ ಬಳಿ ನಡೆದಿದೆ.

Join Our Whatsapp Group

ಬಂಧಿತ ಆರೋಪಿಯನ್ನು ಮುಂಬೈ ಮೂಲದ ಫರ್ಹಾನ್ ಶೇಖ್ ಎನ್ನಲಾಗಿದೆ.

ಕೇಶ್ವಾಪುರದ ರಮೇಶ ಭವನದ ಬಳಿಯಿರುವ ಭುವನೇಶ್ವರಿ ಜ್ಯುವೆಲ್ಲರಿ ಶಾಪ್‌ನಲ್ಲಿನ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ರಾತ್ರಿ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿ ಫರ್ಹಾನ್ ಶೇಖ್‌ನನ್ನು ವಶಕ್ಕೆ ಪಡೆದಿದ್ದರು. ಇನ್ನುಳಿದ ಆರೋಪಿಗಳನ್ನು ವಶಕ್ಕೆ ಪಡೆಯುವ ಸಲುವಾಗಿ ಆರೋಪಿ ಜೊತೆಗೆ ಪೊಲೀಸರು ಇಂದು ಬೆಳಿಗ್ಗೆ ಗಾಮನಗಟ್ಟಿ ರಸ್ತೆ ತಾರಿಹಾಳ ಕ್ರಾಸ್ ಬಳಿ ತಪಾಸಣೆ ನಡೆಸುತಿದ್ದಾಗ ಆರೋಪಿಗಳು ಬರುತ್ತಿದ್ದಂತೆ ಫರ್ಹಾನ್ ಶೇಖ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆ ವೇಳೆ ಗೋಕುಲ ಠಾಣೆಯ ಪಿಎಸ್‌ಐ ಕವಿತಾ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ನಂತರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ‌.

ಗಾಯಗೊಂಡ ಫರ್ಹಾನ್ ನನ್ನು ಬಂಧಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈತನ ವಿರುದ್ಧ ಹೈದರಾಬಾದ್, ಕಲಬುರಗಿ, ಅಹ್ಮದನಗರ, ಸೂರತ್ ಮತ್ತು ಮುಂಬೈನಲ್ಲಿ ಕೊಲೆ, ಡಕಾಯಿತಿ, ದರೋಡೆ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಕೆಲವರು ಪರಾರಿಯಾಗಿದ್ದಾರೆ.

ಆಸ್ಪತ್ರೆಗೆ ಪೊಲೀಸ್ ಆಯುಕ್ತ ಭೇಟಿ:

ಇಂದು ಬೆಳಿಗ್ಗೆ ನಡೆದ ಶೂಟೌಟ್ ಸಂದರ್ಭದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯ ಆರೋಗ್ಯವನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ವಿಚಾರಿಸಿದರು.

ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್‌ಐ ಕವಿತಾ ಮಾಡಗ್ಯಾಳ, ಮಹಿಳಾ ಪೊಲೀಸ್ ಕಾನಸ್ಟೇಬಲ್ ಸುಜಾತ, ಕಾನಸ್ಟೇಬಲ್ ಮಹೇಶ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಘಟನೆಯಿಂದ ಘಾಸಿಗೊಂಡ ಸಿಬ್ಬಂದಿಗೆ ಧೈರ್ಯ ತುಂಬಿ ಆರೋಪಿ ತಪ್ಪಿಸಿಕೊಳ್ಳದಂತೆ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ನಂತರ ಕಾಲಿಗೆ ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಆರೋಪಿಯನ್ನು ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಭವನದ ಬಳಿಯ ಜ್ಯುವೆಲರಿ ಅಂಗಡಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮುಂಬ ಮೂಲದವನಾದ ಆರೋಪಿ ಫರಾನ್ ಶೇಖ್‌ನನ್ನು ಮುಂಬನಿಂದ ಬಂಧನ ಮಾಡಿಕೊಂಡು ಬರಲಾಗಿತ್ತು. ವಿಚಾರಣೆ ವೇಳೆ ಸ್ಥಳೀಯವಾಗಿ ಕೃತ್ಯಕ್ಕೆ ಒಂದಿಬ್ಬರು ಸಹಕಾರ ನೀಡಿದ್ದರು ಎನ್ನುವ ಮಾಹಿತಿ ನೀಡಿದ್ದ. ಆ ಸ್ಥಳೀಕರನ್ನು ತೋರಿಸುವುದಾಗಿ ಗಾಮನಗಟ್ಟಿ ಬಳಿ ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಪಿಎಸ್‌ಐ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಕೇಳದ ಹಿನ್ನೆಲೆಯಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಗುಂಡೇಟು ತಿಂದವನ ಮೇಲೆ 15 ಪ್ರಕರಣ: ಗುಂಡೇಟು ತಿಂದಿರುವ ಆರೋಪಿಯ ಮೇಲೆ ವಿವಿಧ ರಾಜ್ಯಗಳಲ್ಲಿ 15 ಪ್ರಕರಣಗಳಿವೆ. ಕಳ್ಳತನ, ಡಕಾಯಿತಿ, ಕೊಲೆ ಸೇರಿದಂತೆ ಇತರೆ ಪ್ರಕರಣಗಳು ಇವನ ಮೇಲಿವೆ. ಮಹಾರಾಷ್ಟ್ರದಲ್ಲಿ-8, ಕರ್ನಾಟಕ-3, ತೆಲಂಗಾಣ-3 ಹಾಗೂ ಗುಜರಾತಿನಲ್ಲಿ 1 ಪ್ರಕರಣಗಳಿವೆ.