ಮನೆ ಪ್ರವಾಸ “ರಾಣಿ ಕೀ ವಾವ್”‌: ಮೆಟ್ಟಿಲು ಬಾವಿಯ ಸ್ವರ್ಗ!

“ರಾಣಿ ಕೀ ವಾವ್”‌: ಮೆಟ್ಟಿಲು ಬಾವಿಯ ಸ್ವರ್ಗ!

0

ಭಾರತದಲ್ಲಿ ಕಣ್ಮನ ಸೆಳೆಯುವ ಅದೆಷ್ಟೋ ಸ್ಥಳಗಳಿವೆ. ಅಷ್ಟೇ ಅಲ್ಲ ಪ್ರವಾಸಿಗರನ್ನು ಮೂಕವಿಸ್ಮಿತಗೊಳಿಸುವ ಹಲವಾರು ಅದ್ಭುತಗಳಿವೆ. ಅದಕ್ಕೊಂದು ಸೇರ್ಪಡೆ “ರಾಣಿ ಕೀ ವಾವ್”‌. ಇದು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್‌ ಗೆ ಅತ್ಯುತ್ತಮ ಉದಾಹರಣೆಯಾಗಿದೆ.

Join Our Whatsapp Group

ರಾಣಿ ಕೀ ವಾವ್‌ ನ ಮೆಟ್ಟಿಲು ಬಾವಿಯ ರಚನೆಯ ಕೌಶಲ್ಯ ಮತ್ತು ಕಲಾತ್ಮಕತೆ ಎಂತಹವರನ್ನು ಚಕಿತಗೊಳಿಸುತ್ತದೆ. ಗುಜರಾತ್‌ ನ ಪಟಾನ್‌ ಎಂಬ ಪಟ್ಟಣದಲ್ಲಿರುವ ಅದ್ಭುತವಾದ ಮೆಟ್ಟಿಲು ಬಾವಿಯ ರಾಣಿ ಕೀ ವಾವ್‌ ಜನಪ್ರಿಯ ಪ್ರವಾಸಿ ತಾಣವಾಗಿದೆ.

ರಾಣಿಯು ತನ್ನ ಪತಿಯ ಸ್ಮರಣಾರ್ಥವಾಗಿ ನಿರ್ಮಿಸಿರುವ ಈ ಮೆಟ್ಟಿಲು ಬಾವಿ ಸರಸ್ವತಿ ನದಿ ದಂಡೆಯ ಪ್ರದೇಶದಲ್ಲಿದೆ. ರಾಣಿ ಕೀ ವಾವ್‌ ಪುರಾತನ ಬಾವಿಗಳಲ್ಲಿ ಒಂದಾಗಿದೆ. ಇಂದಿಗೂ ಕೂಡಾ ಈ ಮೆಟ್ಟಿಲು ಬಾವಿ ಅದ್ಬುತವಾದ ಸ್ಥಿತಿಯಲ್ಲಿದೆ.

ರಾಣಿ ಕೀ ವಾವ್‌  ಭಾರತೀಯ ಇತಿಹಾಸದಲ್ಲಿನ ಅತ್ಯದ್ಭುತವಾದ ವಾಸ್ತುಶಿಲ್ಪಗಳನ್ನೊಳಗೊಂಡಿದ್ದು, ಅಂದಾಜು 800ಕ್ಕೂ ಅಧಿಕ ವಾಸ್ತುಶಿಲ್ಪಗಳಿವೆ. ಈ ಮೆಟ್ಟಿಲು ಬಾವಿಯ ಅನೇಕ ಕಂಬಗಳ ರಚನೆ ಕಲಾತ್ಮಕ ವಿನ್ಯಾಸ ಹೊಂದಿದೆ. ಬಾವಿಯ ಮೆಟ್ಟಿಲುಗಳನ್ನು ಇಳಿಯುತ್ತಾ ಕೆಳ ಹೋದಂತೆ ಮೈ ರೋಮಾಂಚನಗೊಳಿಸುವ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಲ್ಲಿರುವ ತಲೆಕೆಳಗಾದ ದೇವಾಲಯ ಏಳು ಹಂತದ ಮೆಟ್ಟಿಲುಗಳನ್ನು ಒಳಗೊಂಡಿದೆ.

ಇತಿಹಾಸ:

ಚಾಲುಕ್ಯ ವಂಶದ ರಾಣಿ ಉದಯಮತಿ ತನ್ನ ಪತಿ ಮೊದಲನೇ ಭೀಮ್‌ ದೇವ್‌ ಅವರ ನೆನಪಿಗಾಗಿ ಈ ಐತಿಹಾಸಿಕ ಸ್ಮಾರಕವನ್ನು ನಿರ್ಮಿಸಿದ್ದರು. ಇದೊಂದು ಪ್ರೀತಿಯ ಸಂಕೇತವಾಗಿದ್ದು, ಆ ಕಾರಣಕ್ಕಾಗಿ ಮೆಟ್ಟಿಲು ಬಾವಿಯನ್ನು ರಾಣಿ ಕೀ ವಾವ್‌ ಎಂದು ಕರೆಯಲಾಯಿತು.

ರಾಣಿ ಕೀ ವಾವ್‌ ಪುರಾತನ ಮೆಟ್ಟಿಲು ಬಾವಿಯಾಗಿದೆ. ಇದು ಹಲವು ವರ್ಷಗಳವರೆಗೆ ಮರಳು ಮತ್ತು ಮಣ್ಣಿನಿಂದ ಮುಚ್ಚಿಹೋಗಿತ್ತು. 1890ರ ದಶಕದಲ್ಲಿ ಬಾವಿಯ ಪ್ರದೇಶದಲ್ಲಿ ಕೆಲವು ಕಂಬಗಳು ಮಾತ್ರ ಕಾಣಿಸುತ್ತಿದ್ದ ಸಂದರ್ಭದಲ್ಲಿ ಪುರಾತತ್ವ ಶಾಸ್ತ್ರಜ್ಞರಾದ ಹೆನ್ರಿ ಕೌಸೆನ್ಸ್‌ ಮತ್ತು ಜೇಮ್ಸ್‌  ಬರ್ಗೆಸ್‌ ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಅಚ್ಚರಿಯ ಸಂಗತಿ ಏನೆಂದರೆ ಈ ಸ್ಮಾರಕ 1940ರವರೆಗೂ ಮರಳಿನಡಿಯೇ ಹೂತು ಹೋಗಿತ್ತು.!

ಕೊನೆಗೂ 1980ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಈ ಐತಿಹಾಸಿಕ ಸ್ಥಳದ ಮರುಸ್ಥಾಪನೆಯ ಸಾಹಸ ಕಾರ್ಯಕ್ಕೆ ಮುಂದಾಗಿತ್ತು. ಮರಳ ರಾಶಿಯಲ್ಲಿ ಹೂತು ಹೋಗಿದ್ದ ಪುರಾತನ ಮೆಟ್ಟಿಲು ಬಾವಿಯ ರಚನೆಯನ್ನು ಕಂಡು ಅಧಿಕಾರಿಗಳು ದಂಗಾಗಿಬಿಟ್ಟಿದ್ದರಂತೆ. 2014ರಲ್ಲಿ ರಾಣಿ ಕೀ ವಾವ್‌ ಅನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತ್ತು. ಈ ಅದ್ಭುತ ವಾಸ್ತುಶಿಲ್ಪ, ಸ್ಮಾರಕವನ್ನು ವೀಕ್ಷಿಸಲು ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.

ರಾಣಿ ಕೀ ವಾವ್‌ ನಲ್ಲಿರುವ ಹೆಚ್ಚಿನ ಶಿಲ್ಪಗಳು ಭಗವಾನ್‌ ವಿಷ್ಣುವಿಗೆ ಸಂಬಂಧಪಟ್ಟ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ವಿಷ್ಣುವಿನ ಅವತಾರಗಳಾದ ರಾಮ, ಶ್ರೀಕೃಷ್ಣ, ನರಸಿಂಹ, ವಾಮನ ಹೀಗೆ ಹಲವು ರೂಪಗಳ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ.

ಐತಿಹಾಸಿಕ ಮೆಟ್ಟಿಲು ಬಾವಿಯ ವಿನ್ಯಾಸ ಹೇಗಿದೆ…

ಈ ಪುರಾತನ ಮೆಟ್ಟಿಲು ಬಾವಿಯು 64 ಮೀಟರ್‌ ಉದ್ದ, 20 ಮೀಟರ್‌ ನಷ್ಟು ಅಗಲ ಹಾಗೂ 28 ಮೀಟರ್‌ ಗಳಷ್ಟು ಆಳ ಹೊಂದಿದೆ. ಮೆಟ್ಟಿಲು ಬಾವಿಯ ಸ್ಮಾರಕದಲ್ಲಿ 800ಕ್ಕೂ ಅಧಿಕ ಅತ್ಯಾಕರ್ಷಕವಾದ ವಾಸ್ತುಶಿಲ್ಪಗಳಿವೆ. ರಾಣಿ ಕೀ ವಾವ್‌ ಕೇವಲ ನೀರಿನ ಮೂಲವನ್ನು ಮಾತ್ರ ಹೊಂದಿಲ್ಲ, ಜೊತೆಗೆ ಇದೊಂದು ಪೂಜಾ ಸ್ಥಳವೂ ಹೌದು. ಇಲ್ಲಿನ ಅಪ್ರತಿಮವಾದ ವಾಸ್ತುಶಿಲ್ಪವನ್ನು ನೋಡಲು ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು.

ಪ್ರಯಾಣ: ಗುಜರಾತ್‌ ನ ಅಹಮದಾಬಾದ್‌ ನಿಂದ ಪಟಾನ್‌ ಗೆ ಸುಮಾರು 4 ಗಂಟೆಯ ಪ್ರಯಾಣ ಬೆಳೆಸಿ, ಅಲ್ಲಿಂದ ಮೆಹ್ಸನ್‌ ಗೆ ತಲುಪಿ, ಬಳಿಕ ಅಲ್ಲಿಂದ ರಾಣಿ ಕೀ ವಾವ್‌ ಗೆ ಭೇಟಿ ನೀಡಬಹುದಾಗಿದೆ.  ರೈಲು ಮಾರ್ಗ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಪಟಾನ್‌ ನಲ್ಲಿ ರೈಲ್ವೆ ನಿಲ್ದಾಣವಿದೆ. ವಿಮಾನದಲ್ಲಿ ತೆರಳಿದರೆ ಅಹಮದಾಬಾದ್‌ ನಲ್ಲಿ ಇಳಿದು, ಅಲ್ಲಿಂದ ರಾಣಿ ಕೀ ವಾವ್‌ ಗೆ 125 ಕಿಲೋ ಮೀಟರ್‌ ದೂರವಿದೆ. ಬಸ್‌ ಅಥವಾ ಕಾರನ್ನು ಬಳಸಬಹುದಾಗಿದೆ.