ಮನೆ ಮನರಂಜನೆ ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

0

“ಇದೊಂದು ಹೊಸ ಪ್ರಯೋಗದ ಸಿನಿಮಾ…’- ಹೀಗೆ ಹೇಳಿದರು ನಟ ಕಿಶೋರ್‌. ಬಹುಭಾಷಾ ನಟ ಕಿಶೋರ್‌ ಪತ್ರಿಕಾಗೋಷ್ಠಿಗೆ ಬಂದು ಆ ಸಿನಿಮಾ ಮಾತನಾಡೋದು ಅಪರೂಪ. ಆದರೆ, ಸಂಪೂರ್ಣ ಹೊಸಬರೇ ಸೇರಿ ಮಾಡಿರುವ “ಕಬಂಧ’ ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದರು. ಸಿನಿಮಾ ಬಗ್ಗೆ ಖುಷಿಯಿಂದ ಮಾತನಾಡಿದರು. ಅದಕ್ಕೆ ಕಾರಣ ಸಿನಿಮಾದ ಕಂಟೆಂಟ್‌. ಸಹಜ ಕೃಷಿ ವಿಚಾರವನ್ನಿಟ್ಟುಕೊಂಡು ತಯಾರಾಗಿರುವ ಈ ಸಿನಿಮಾ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಹೀಗಾಗಿ ಸಿನಿಮಾ ತಂಡ ಮಾಧ್ಯಮ ಮುಂದೆ ಬಂದಿತ್ತು.

Join Our Whatsapp Group

 “ನಾನು ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ನಾನು ಕೂಡಾ ಒಬ್ಬ ಸಹಜ ಕೃಷಿ ಮಾಡುವವನು ಎಂಬುದು. ಸಿನಿಮಾದಲ್ಲಿ ಒಂದೊಳ್ಳೆಯ ಕಂಟೆಂಟ್‌ ಇದೆ. ಅದಕ್ಕೊಂದು ಹಾರರ್‌ ಸ್ಪರ್ಶವನ್ನು ನೀಡಿದ್ದಾರೆ. ಇವತ್ತು ರೈತನಿಗೆ ತಾನು ಏನು ಬೆಳೆಯಬೇಕು ಮತ್ತು ಬೆಳೆದ ಬೆಳೆಯನ್ನು ಹೇಗೆ ಮಾರುಕಟ್ಟೆ ಮಾಡಬೇಕೆಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ಇಂತಹ ಹಲವು ಅಂಶಗಳನ್ನು ಹೇಳಲಾಗಿದೆ. ಒಂದೊಳ್ಳೆಯ ಪ್ರಯತ್ನ’ ಎಂದರು.

ಪ್ರಸಾದ್‌ ವಸಿಷ್ಠ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ. “ಪುಟ್ಟಗೌರಿ ಮದುವೆ’, “ಗೃಹಲಕ್ಷ್ಮಿಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಂದ ಸಿನಿಮಾ ರಂಗಕ್ಕೆ ಬಂದ ಪ್ರಸಾದ್‌ “ದ್ವೈತ’, “ಕ್ರಾಂತಿ’, “ಮುಗುಳುನಗೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ನೇಹಿತ ಸೇರಿದಂತೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಪ್ರಸಾದ್‌ ವಸಿಷ್ಠ ನಾಯಕ ನಟರಾಗಿ “ಕಬಂಧ’ ಸಿನಿಮಾದಲ್ಲಿ ನಟಿಸಿದ್ದಾರೆ.

ಚಿತ್ರದ ಕಥೆ ಬಗ್ಗೆ ಹೇಳುವ ಪ್ರಸಾದ್‌, ಇದೊಂದು ವ್ಯವಸಾಯದ ಸುತ್ತ ನಡೆಯುವ ಕಥೆ ಎನ್ನುವ ಅವರು, ಇವತ್ತಿನ ವೇಗದ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್‌ ಮತ್ತು ಟಾಕ್ಸಿಕ್‌ ಅಂಶಗಳು ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆದರೆ, ನಾವು ಆ ವಿಷಯವಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ವಿಷಯವಾಗಿ ಕಥೆ ಮಾಡಿಕೊಂಡಿದ್ದೇವೆ. ಕಬಂಧ, ರಾಮಾಯಣದಲ್ಲಿ ಬರುವ ಒಬ್ಬ ರಾಕ್ಷಸನ ಹೆಸರು. ಅವನ ಬಾಹುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಅದಕ್ಕೆ ಕಬಂಧ ಬಾಹು ಎನ್ನಲಾಗುತ್ತದೆ. ಅದೇ ರೀತಿ ಈ ವಿಷಕಾರಿ ವಸ್ತುಗಳೆಂಬ ಕಬಂಧ ಬಾಹುಗಳಿಗೆ ಹೇಗೆ ಸಿಕ್ಕಿಕೊಂಡಿದ್ದೇವೆ ಎಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದು. ಇದನ್ನು ಸೈಕಲಾಜಿಕಲ್‌ ಹಾರರ್‌ ಚಿತ್ರ ಎನ್ನಬಹುದು’ ಎನ್ನುತ್ತಾರೆ.

ಚಿತ್ರದ ಬಗ್ಗೆ ಹೇಳುವ ಪ್ರಸಾದ್‌, ಇದೊಂದು ಹಾಲಿವುಡ್‌ ಹಾರರ್‌ ಶೈಲಿಯ ಸಿನಿಮಾ. ಇಂತಹ ಕಥೆಗಳನ್ನು ಸಿನಿಮಾಗೆ ಅಳವಡಿಸುವುದು ಕಷ್ಟ. ಈ ಚಿತ್ರದಲ್ಲಿ ನಾನು ನಚಿಕೇತ ಎಂಬ ಜಮೀನ್ದಾರಿ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಅವನ ಸುತ್ತಮುತ್ತ ನಡೆಯುವ ಕಥೆ ಎನ್ನುತ್ತಾರೆ. ಈ ಸಿನಿಮಾವನನ್ನು ಸತ್ಯನಾಥ್‌ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ನಟಿಸಿರುವ ಛಾಯಾಶ್ರೀ, ಅವಿನಾಶ್‌, ಪ್ರಿಯಾಂಕಾ ಮಳಲಿ, ಪ್ರಶಾಂತ್‌ ಸಿದ್ದಿ, ಶ್ರುತಿ ನಾಯಕ್‌ ಮುಂತಾದವರು ನಟಿಸಿದ್ದಾರೆ.