ಮನೆ ರಾಜ್ಯ ರಾಜಸ್ಥಾನದಿಂದ ಬಂದಿದ್ದು ಮೇಕೆ ಮಾಂಸ, ನಾಯಿ ಮಾಂಸ ಅಲ್ಲ; ಡಾ.ಜಿ.ಪರಮೇಶ್ವರ್‌

ರಾಜಸ್ಥಾನದಿಂದ ಬಂದಿದ್ದು ಮೇಕೆ ಮಾಂಸ, ನಾಯಿ ಮಾಂಸ ಅಲ್ಲ; ಡಾ.ಜಿ.ಪರಮೇಶ್ವರ್‌

0

ದಾವಣಗೆರೆ: ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದಿದ್ದು ನಾಯಿ ಮಾಂಸ ಅಲ್ಲ. ಅದು ಮೇಕೆ ಮಾಂಸವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಾಯಿ ಮಾಂಸ ತಂದು ಮೇಕೆ ಮಾಂಸ ಎಂದು ಮಾರಾಟ ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿ ರೈಲು ನಿಲ್ದಾಣದಲ್ಲಿ ಗಲಾಟೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ಈ ಸಂಬಂಧ ಪ್ರಯೋಗಾಲಯದ ವರದಿ ಬಂದಿದ್ದು, ವರದಿ ಅನ್ವಯ ಅದು ಮೇಕೆ ಮಾಂಸ ಎಂಬುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಸ್ಥಾನದಿಂದ ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುವುದು ಅವರ ವೃತ್ತಿ. ಆದರೆ ಕೆಲವರು ಅನಾವಶ್ಯಕವಾಗಿ ನಾಯಿ ಮಾಂಸ ಎಂದು ಆಪಾದನೆ ಮಾಡಿದ್ದರು. ಈಗ ಪ್ರಯೋಗಾಲಯ ನೀಡಿದ ವರದಿಯ ಅನ್ವಯ ಅದು ಮೇಕೆ ಮಾಂಸ ಎಂಬುದು ಬಹಿರಂಗಗೊಂಡಿದೆ. ಅನವಶ್ಯಕವಾಗಿ ದುರುದ್ದೇಶದಿಂದ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಮಾಂಸ ವರ್ತಕರಿಗೆ ನೋಟಿಸ್‌ ಕೊಡಲು ಖಾಕಿ ಸಿದ್ಧತೆ:

ರಾಜಸ್ಥಾನದಿಂದ ರೈಲಿನಲ್ಲಿ ನಗರಕ್ಕೆ ಮಾಂಸ ಸಾಗಣೆ ಪ್ರಕರಣ ಸಂಬಂಧ ರಾಜಸ್ಥಾನ ಮತ್ತು ನಗರದ ಮಾಂಸ ವ್ಯಾಪಾರಿಗಳಿಗೆ ನೋಟಿಸ್‌ ನೀಡಲು ಕಾಟನ್‌ ಪೇಟೆ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಈ ಸಂಬಂಧ ರಾಜಸ್ಥಾನದಿಂದ ನಗರಕ್ಕೆ ರೈಲಿನಲ್ಲಿ ಮಾಂಸ ಪಾರ್ಸೆಲ್‌ ಕಳುಹಿಸಿದವರು ಹಾಗೂ ಆ ಮಾಂಸವನ್ನು ನಗರಕ್ಕೆ ತರಿಸಿಕೊಂಡಿರುವ ಮಾಂಸದ ವ್ಯಾಪಾರಿಗಳ ಬಗ್ಗೆ ರೈಲ್ವೆ ಇಲಾಖೆಯಿಂದ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ರೈಲ್ವೆ ಇಲಾಖೆಯಿಂದ ಸೋಮವಾರ ಆ ವ್ಯಕ್ತಿಗಳ ಮಾಹಿತಿ ಲಭ್ಯವಾಗಲಿದ್ದು, ಬಳಿಕ ಪೊಲೀಸರು ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಲಿದ್ದಾರೆ. ನಾಯಿ ಮಾಂಸವೋ ಅಥವಾ ಮೇಕೆ ಮಾಂಸವೋ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ನೋಟಿಸ್‌ ಜಾರಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಜುಲೈ 26 ರಾಜಸ್ಥಾನದಿಂದ ನಗರದ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ 90 ಬಾಕ್ಸ್‌ಗಳಲ್ಲಿ ಸುಮಾರು 4,500 ಕೆ.ಜಿ.ಮಾಂಸ ಪಾರ್ಸೆಲ್‌ ಬಂದಿತ್ತು. ಈ ಮಾಂಸ ನಾಯಿ ಮಾಂಸ. ಕಳಪೆ ಗುಣಮಟ್ಟದ ಮಾಂಸ. ತಿನ್ನಲು ಯೋಗ್ಯವಲ್ಲದ ಮಾಂಸ ಎಂದು ರಾಷ್ಟ್ರ ರಕ್ಷಣೆ ಪಡೆ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿ ಹಾಗೂ ಸಹಚರರು ಆರೋಪಿಸಿದ್ದರು. ಮಾಂಸವಿದ್ದ ಬಾಕ್ಸ್‌ಗಳನ್ನು ತೆರೆದು ಪರಿಶೀಲಿಸುವಂತೆ ರೈಲು ನಿಲ್ದಾಣದಲ್ಲಿ ಗಲಾಟೆ ಮಾಡಿದ್ದರು.

ಈ ಸಂಬಂಧ ಕಾಟನ್‌ಪೇಟೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧ ಎರಡು ಹಾಗೂ ರಾಜಸ್ಥಾನದಿಂದ ಮಾಂಸ ಪಾರ್ಸೆಲ್‌ ಕಳುಹಿಸಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಒಂದು ಸೇರಿ ಒಟ್ಟು ಮೂರು ಪ್ರತ್ಯೇಕ ಎಫ್ಐಆರ್‌ ದಾಖಲಾಗಿವೆ.

ಈ ಬೆನ್ನಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಲ್ಲಿ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.