ಮನೆ ರಾಜ್ಯ ಕೆಎಸ್‌ ಆರ್‌ ಟಿಸಿ ಬಸ್‌ ಗಳಲ್ಲಿ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ವ್ಯವಸ್ಥೆ

ಕೆಎಸ್‌ ಆರ್‌ ಟಿಸಿ ಬಸ್‌ ಗಳಲ್ಲಿ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ವ್ಯವಸ್ಥೆ

0

ಬೆಂಗಳೂರು: ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್ ಮಾಡಿ ಟಿಕೆಟ್ ನೀಡುವ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ಬಳಕೆಯು ಪ್ರಾಯೋಗಿಕವಾಗಿ 150 ಕೆಎಸ್‌ ಆರ್‌ ಟಿಸಿ ಬಸ್‌ಗಳಲ್ಲಿ ಆರಂಭಗೊಳ್ಳಲಿದೆ. ಸಾಧಕ–ಬಾಧಕಗಳನ್ನು ಪರಿಶೀಲಿಸಿದ ಬಳಿಕ ಎಲ್ಲ ಬಸ್‌ಗಳ ನಿರ್ವಾಹಕರ ಕೈಗೆ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ಬರಲಿದೆ.

Join Our Whatsapp Group

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಎನ್‌ ಡಬ್ಲ್ಯುಆರ್‌ ಟಿಸಿ) ಮತ್ತು ಬಿಎಂಟಿಸಿಯ ಕೆಲವು ಮಾರ್ಗಗಳಲ್ಲಿ ಯುನಿಫೈಡ್‌ ಪೇಮೆಂಟ್‌ ಇಂಟರ್‌ ಫೇಸ್‌ (ಯುಪಿಐ) ತಂತ್ರಜ್ಞಾನದ ಮೂಲಕ ಟಿಕೆಟ್‌ ದರ ಪಾವತಿ ಮಾಡುವ ಪದ್ಧತಿ ಜಾರಿಯಲ್ಲಿದ್ದರೂ ಅದು ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ವ್ಯವಸ್ಥೆಯಲ್ಲ. ಕ್ಯೂಆರ್‌ ಕೋಡ್‌ ಮುದ್ರಣವನ್ನು ನಿರ್ವಾಹಕರು ಕುತ್ತಿಗೆಗೆ ನೇತು ಹಾಕಿಕೊಂಡಿರುತ್ತಾರೆ.

ಸ್ಕ್ಯಾನ್‌ ಮಾಡಿ ಟಿಕೆಟ್‌ ದರ ಪಾವತಿಸಿದವರಿಗೆ ಟಿಕೆಟ್‌ ನೀಡುತ್ತಾರೆ. ಕೆಎಸ್‌ಆರ್‌ಟಿಸಿಯಲ್ಲಿ ಈ ಪದ್ಧತಿಯ ಬದಲು ಟಿಕೆಟ್‌ ಮಷೀನ್‌ನಲ್ಲೇ ಕ್ಯೂಆರ್‌ ಕೋಡ್‌ ಒದಗಿಸುವ ತಂತ್ರಜ್ಞಾನ ಇರಲಿದೆ.

ಕೆಎಸ್‌ಆರ್‌ಟಿಸಿಯಲ್ಲಿ 83 ಘಟಕಗಳಿವೆ. ಸದ್ಯ ಎಲೆಕ್ಟ್ರಿಕ್‌ ಟಿಕೆಟ್‌ ಮಷೀನ್‌ಗಳನ್ನು (ಇಟಿಎಂ) ಬಳಸಲಾಗುತ್ತಿದೆ. ಇನ್ನು ಮುಂದೆ ಡಿಜಿಟಲ್‌ ಪೇಮೆಂಟ್‌ ಎನೇಬಲ್‌ (ಡಿಪಿಇ) ಇರುವ ಸ್ಮಾರ್ಟ್‌ ಇಟಿಎಂಗಳು ಬಳಕೆಯಾಗಲಿವೆ. ಫೋನ್‌ ಪೇ, ಗೂಗಲ್‌ ಪೇ ಸಹಿತ ಯುಪಿಐ ಆಧಾರಿತ ಪಾವತಿ ಸ್ವೀಕರಿಸಿದಾಗ ಆ ಮೊತ್ತವು ಸಂಬಂಧಪಟ್ಟ ಡಿಪೊ ಖಾತೆಗೆ ಜಮೆ ಆಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವಾರದೊಳಗೆ ಪರೀಕ್ಷೆ:

‘ಪ್ರೀಮಿಯಂ ಬಸ್‌, ಸಾಮಾನ್ಯ ಬಸ್‌, ಎಕ್ಸ್‌ಪ್ರೆಸ್‌ ಬಸ್‌, ನಗರ ಸಾರಿಗೆ ಬಸ್‌ ಸೇರಿ ಕೆಎಸ್‌ಆರ್‌ಟಿಸಿಯ ಒಟ್ಟು 150 ಬಸ್‌ಗಳಲ್ಲಿ ಮುಂದಿನವಾರ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ಪ್ರಾಯೋಗಿಕವಾಗಿ ಬಳಸಲಾಗುವುದು. ‘ಶಕ್ತಿ’ ಯೋಜನೆಯ ಪ್ರಯಾಣಿಕರು ಇರುವ ಬಸ್‌ಗಳಲ್ಲಿ ಈ ಮಷೀನ್‌ ಬಳಕೆಯಿಂದ ಸಮಸ್ಯೆ ಆಗುತ್ತದೆಯೇ? ಇತರ ಬಸ್‌ಗಳಲ್ಲಿ ಯಾವ ಸಮಸ್ಯೆಯಾಗಲಿದೆ ಎಂದು ಪರೀಕ್ಷೆ ನಡೆಸಲಾಗುತ್ತದೆ. ನಗದು ನೀಡಿದಾಗಲೂ ಇದೇ ಮಷೀನ್‌ ಮೂಲಕ ಟಿಕೆಟ್‌ ನೀಡುವುದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತದೆಯೇ ಎಂಬುದು ಸೇರಿ ಎಲ್ಲ ರೀತಿಯ ಪರೀಕ್ಷೆಗಳು ನಡೆಯಲಿವೆ. ಸಮಸ್ಯೆಗಳು ಕಂಡು ಬಂದರೆ ಅದನ್ನು ನಿವಾರಿಸಿದ ಬಳಿಕ ಎಲ್ಲ ಬಸ್‌ಗಳಲ್ಲಿ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಮಾಹಿತಿ ನೀಡಿದ್ದಾರೆ.