ಮನೆ ಕಾನೂನು ಚಲನಚಿತ್ರ ಆನ್‌ಲೈನ್‌ ಬುಕಿಂಗ್‌ ಗೆ ಮನರಂಜನಾ ತೆರಿಗೆ ಇಲ್ಲ: ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ...

ಚಲನಚಿತ್ರ ಆನ್‌ಲೈನ್‌ ಬುಕಿಂಗ್‌ ಗೆ ಮನರಂಜನಾ ತೆರಿಗೆ ಇಲ್ಲ: ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್

0

ಚಿತ್ರಮಂದಿರದ ಮಾಲೀಕರು ವಿಧಿಸುವ, ಟಿಕೆಟ್ ವೆಚ್ಚದ ಭಾಗವಾಗಿರದ ಆನ್‌ಲೈನ್ ಬುಕಿಂಗ್ ಶುಲ್ಕಕ್ಕೆ ತಮಿಳುನಾಡು ಮನರಂಜನಾ ತೆರಿಗೆ ಕಾಯಿದೆ- 1939ರ ಅಡಿಯಲ್ಲಿ ಮನರಂಜನಾ ತೆರಿಗೆ ವಿಧಿಸುವಂತಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. [ವಾಣಿಜ್ಯ ತೆರಿಗೆ ಅಧಿಕಾರಿ ಮತ್ತು (ಹಿಂದೆ SPI ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದ) PVR ಲಿಮಿಟೆಡ್ ನಡುವಣ ಪ್ರಕರಣ].

Join Our Whatsapp Group

ತಮಿಳುನಾಡು ಮನರಂಜನಾ ತೆರಿಗೆ ಕಾಯಿದೆಯು ಅಂತಹ ಆನ್‌ಲೈನ್‌ ಸೇವಾ ಶುಲ್ಕಗಳನ್ನು ಮನರಂಜನಾ ತೆರಿಗೆಯ ಭಾಗವಾಗಿ ಸೇರಿಸಲು ಅನುಮತಿಸುವುದಿಲ್ಲ ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್ 2020ರ ಆದೇಶವನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಾಲಯ “ಹೆಚ್ಚುವರಿ ಶುಲ್ಕ ವಿಧಿಸಿರುವುದು ಮನರಂಜನೆಗೆ ಅಲ್ಲ ಬದಲಿಗೆ ಸಿನಿಮಾ ಥಿಯೇಟರ್‌ಗೆ ಬರಲಾಗದೆ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ಜನರ ಅನುಕೂಲಕ್ಕಾಗಿ. ಪೆಟ್ರೋಲ್ / ಡೀಸೆಲ್ ಉಳಿತಾಯ, ಪಾರ್ಕಿಂಗ್ ಶುಲ್ಕ ಇತ್ಯಾದಿ ಉಳಿತಾಯವಾಗುತ್ತದೆ. ಇದನ್ನು ಮನರಂಜನಾ ತೆರಿಗೆ ಅಡಿಯಲ್ಲಿ ಹೇಗೆ ತೆಗೆದುಕೊಳ್ಳಲಾಗುತ್ತದೆ?,” ಎಂದಿದೆ. 

ಈ ಹಿಂದಿನ ವಿಚಾರಣೆ ವೇಳೆ ಕೂಡ ಡಿಜಿಟಲ್ ಮೂಲಕ ಟಿಕೆಟ್  ಕಾಯ್ದಿರಿಸಿದಾಗ ಸಿನಿಮಾ ಥಿಯೇಟರ್‌ಗಳು ಒದಗಿಸುವ ಅಂತಹ ಅನುಕೂಲವು ಮನರಂಜನಾ ತೆರಿಗೆಯ ಅಡಿಯಲ್ಲಿ ಬರುತ್ತದೆ ಎಂಬ ಪ್ರತಿಪಾದನೆಗೆ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿತ್ತು.

ಇಂದು ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗರತ್ನ ಅವರು, ಸೇವೆಗೆ ಶುಲ್ಕ ವಿಧಿಸಲಾಗುತ್ತಿದ್ದು, ಮನರಂಜನಾ ತೆರಿಗೆ ವ್ಯಾಪ್ತಿಗೆ ಅದನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದರು.

“ಹಾಗಾದರೆ ನೇರವಾಗಿ ಸಿನಿಮಾ ಥಿಯೇಟರ್‌ಗೆ ಹೋಗಿ ಟಿಕೆಟ್ ಪಡೆಯುವ ಬದಲು, ನಾನು ಅದನ್ನು ಮನೆಯಿಂದಲೇ ಖರೀದಿಸುತ್ತಿದ್ದೇನೆ ಎಂದಿಟ್ಟುಕೊಳ್ಳಿ. ನಿಮ್ಮ ಸೇವೆಗೆ ನೀವು ತೆಗೆದುಕೊಳ್ಳುತ್ತಿರುವ ಶುಲ್ಕ ಇದು. ಅದು ಮನರಂಜನಾ ತೆರಿಗೆ ಅಡಿಯಲ್ಲಿ ಹೇಗೆ ಬರುತ್ತದೆ? ನಾನು ಟಾಕೀಸ್ ಅಥವಾ ಥಿಯೇಟರ್‌ಗಳಿಗೆ ಹೋಗುವ ಬದಲು ಐಷಾರಾಮವಾಗಿ ಇದೀಗ ಟಿಕೆಟ್‌ ಪಡೆಯುತ್ತಿದ್ದೇನೆ. ಇದು ಮನರಂಜನೆ ತೆರಿಗೆ ವ್ಯಾಪ್ತಿಗೆ ಬರುತ್ತದೆಯೇ? ಇದು ನನಗೆ ಒದಗಿಸುತ್ತಿರುವ ಹೆಚ್ಚುವರಿ ಅನುಕೂಲ. ಚಲನಚಿತ್ರ ಅಥವಾ ಮನರಂಜನಾ ವಿಭಾಗಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ” ಎಂದರು.

ಅಂತೆಯೇ ಚಲನಚಿತ್ರ ವೀಕ್ಷಣೆಗಾಗಿ ಆನ್‌ಲೈನ್‌ನಲ್ಲಿ ಹೆಚ್ಚುವರಿಯಾಗಿ ಹಣ ಪಾವತಿಸುತ್ತಿರುವುದರಿಂದ ಅದನ್ನು ಮನರಂಜನಾ ತೆರಿಗೆ ವ್ಯಾಪ್ತಿಗೆ ತರಬೇಕು ಎಂಬ ತೆರಿಗೆ ಇಲಾಖೆ ಪರ ವಕೀಲರು ವಾದವನ್ನು ತಿರಸ್ಕರಿಸಿದ ಅದು ಮೇಲ್ಮನವಿಯನ್ನು ವಜಾಗೊಳಿಸಿತು.