ಮನೆ ರಾಷ್ಟ್ರೀಯ ವಯನಾಡ್ ಭೂಕುಸಿತ: ಮೃತರ ಸಂಖ್ಯೆ 256ಕ್ಕೆ ಏರಿಕೆ,100ಕ್ಕೂ ಹೆಚ್ಚು ಮಂದಿ ನಾಪತ್ತೆ

ವಯನಾಡ್ ಭೂಕುಸಿತ: ಮೃತರ ಸಂಖ್ಯೆ 256ಕ್ಕೆ ಏರಿಕೆ,100ಕ್ಕೂ ಹೆಚ್ಚು ಮಂದಿ ನಾಪತ್ತೆ

0

ಮೇಪ್ಪಾಡಿ: ವಯನಾಡ್ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 276 ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಇನ್ನೂ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕಲ್ಲು, ಮಣ್ಣು ತುಂಬಿದ ಮನೆಗಳಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Join Our Whatsapp Group

ಘಟನೆ ಕುರಿತು ಕೇರಳ ಮುಖ್ಯಮಂತ್ರಿ ನೀಡಿರುವ ಹೇಳಿಕೆಯಲ್ಲಿ ಕಳೆದ ಎರಡು ದಿನಗಳಲ್ಲಿ ಭೂಕುಸಿತದಿಂದ 1,592 ಜನರನ್ನು ರಕ್ಷಿಸಲಾಗಿದೆ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ವಯನಾಡು ಜಿಲ್ಲೆಯಲ್ಲಿ 8,000 ಜನರನ್ನು 82 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಇನ್ನು ಜಿಲ್ಲಾಡಳಿತ ನೀಡಿರುವ ಮಾಹಿತಿಯಲ್ಲಿ 1,167 ರಕ್ಷಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 99 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಇತರರನ್ನು ವಿವಿಧ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 96 ಮೃತ ದೇಹಗಳನ್ನು ಗುರುತಿಸಲಾಗಿದ್ದು, 166 ಮಂದಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರಾಜ್ಯ ವಿಪತ್ತು ನಿಧಿಯಿಂದ (ಎಸ್‌ಡಿಆರ್‌ಎಫ್) ಕೇರಳಕ್ಕೆ 145 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ರಾಜ್ಯಸಭೆಗೆ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಜೊತೆಗೆ ಮುಂಡಕೈ ಮತ್ತು ಚುರಲ್ಮಲಾ ಅತ್ಯಂತ ಹಾನಿಗೊಳಗಾದ ಪ್ರದೇಶಗಳನ್ನು ಸಂಪರ್ಕಿಸಲು 190 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು ಇಂದು ಸಂಜೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಿಂದ ವಯನಾಡಿಗೆ 17 ಟ್ರಕ್‌ಗಳಲ್ಲಿ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ 100 ಸೈನಿಕರು ಶೀಘ್ರದಲ್ಲೇ ವಿಪತ್ತು ಸ್ಥಳಕ್ಕೆ ತಲುಪಲಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರರು ಇಂದು ವಯನಾಡಿಗೆ ಭೇಟಿ ನೀಡಲಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕಾ ಅವರು ಪರಿಹಾರ ಶಿಬಿರಗಳಿಗೆ ಮತ್ತು ಚಿಕಿತ್ಸೆಯಲ್ಲಿರುವವರಿಗೆ ಭೇಟಿ ನೀಡಲಿದ್ದಾರೆ. ಇಬ್ಬರೂ ಮಂಗಳವಾರ ಬರಲು ನಿರ್ಧರಿಸಿದ್ದರು ಆದರೆ ಹವಾಮಾನ ವೈಪರೀತ್ಯದಿಂದ ಅವಕಾಶ ನೀಡಲಿಲ್ಲ. ನಂತರ ಭೇಟಿಯನ್ನು ಇಂದಿಗೆ ಮುಂದೂಡಲಾಯಿತು.

ಕೇರಳ ದುರಂತದ ಕುರಿತು ರಾಹುಲ್ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಕೇಂದ್ರ ಘೋಷಿಸಿರುವ ಪರಿಹಾರ ಧನ ಹೆಚ್ಚಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.

ಸರ್ವಪಕ್ಷ ಸಭೆ:

ಇಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ವಯನಾಡ್ ಕಲೆಕ್ಟರೇಟ್‌ನ ಎಪಿಜೆ ಹಾಲ್‌ನಲ್ಲಿ ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದೆ. ವಯನಾಡಿನಲ್ಲಿ ಬೀಡುಬಿಟ್ಟಿರುವ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ರಾಜಕೀಯ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಎಪಿಜೆ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆಯೂ ನಡೆಯಲಿದೆ.