ಮನೆ ಕಾನೂನು ಕೆಆರ್‌ಎಸ್‌ ಸುರಕ್ಷತೆ: ಅಧ್ಯಯನ ವರದಿ ಸಲ್ಲಿಸಲು ಅಣೆಕಟ್ಟು ಸುರಕ್ಷತಾ ಸಮಿತಿಗೆ 4 ತಿಂಗಳ ಕಾಲಾವಕಾಶ ನೀಡಿದ...

ಕೆಆರ್‌ಎಸ್‌ ಸುರಕ್ಷತೆ: ಅಧ್ಯಯನ ವರದಿ ಸಲ್ಲಿಸಲು ಅಣೆಕಟ್ಟು ಸುರಕ್ಷತಾ ಸಮಿತಿಗೆ 4 ತಿಂಗಳ ಕಾಲಾವಕಾಶ ನೀಡಿದ ಹೈಕೋರ್ಟ್‌

0

ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್) ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲಾ ಬಗೆಯ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತೆ ವಿಚಾರವಾಗಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶಬೇಕು ಎಂದು ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

Join Our Whatsapp Group

ನ್ಯಾಯಾಲಯದ ಆದೇಶದಂತೆ ಕೆಆರ್‌ಎಸ್‌ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಮತ್ತು ಸಿಮೀತ ಗಣಿ ಚಟುವಟಿಕೆಗಳಿಗೆ ಷರತ್ತುಗಳನ್ನು ವಿಧಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರ ಪ್ರತಿನಿಧಿಸಿದ್ದ ವಕೀಲ ಎಸ್ ಎಸ್ ಮಹೀಂದ್ರ ಅವರು “ಕೆಆರ್‌ಎಸ್ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ವಿಚಾರವಾಗಿ ಹಾಗೂ ‘ಪ್ರಾಯೋಗಿಕ ಸ್ಫೋಟ’ ವಿಧಾನದ ಮೂಲಕ ಪರಿಶೀಲಿಸುವ ಬದಲು ರಾಜ್ಯ ಅಣೆಕಟ್ಟು ಸುರಕ್ಷತಾ ಸಮಿತಿಯು ‘ಮ್ಯಾಥಮ್ಯಾಟಿಕಲ್ ಮೊಡಾಲಿಟಿ ಆ್ಯಂಡ್ ಪ್ರಾಪರ್ ವ್ಯಾಲಿಡೇಷನ್’ ವಿಧಾನದ ಮೂಲಕ ವೈಜ್ಞಾನಿಕವಾಗಿ ಸಮಗ್ರ ವಿಶ್ಲೇಷಣೆ ಮಾಡುತ್ತಿದೆ. ಇದಕ್ಕಾಗಿ ಸಮಯ ಹಿಡಿಯುತ್ತದೆ. ಆದ್ದರಿಂದ ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶಬೇಕು” ಎಂದು ಕೋರಿದರು.

ಈ ಕೋರಿಕೆಯನ್ನು ಪರಿಗಣಿಸಿದ ಪೀಠವು ರಾಜ್ಯ ಅಣೆಕಟ್ಟು ಸುರಕ್ಷತಾ ಸಮಿತಿಗೆ ನಾಲ್ಕು ತಿಂಗಳು ಸಮಯ ನೀಡಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.

ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಗಣಿ ಚಟುವಟಿಕೆಗಳನ್ನು ನಿಷೇಧಿಸಿ ಹೊರಡಿಸಲಾದ ಆದೇಶ ಮಾರ್ಪಾಡು ಮಾಡಬೇಕು; ಗಣಿ ಚಟುವಟಿಕೆ ನಿಷೇಧಿಸಿ ಹೊರಡಿಸಿದ ಆದೇಶದಲ್ಲಿ ಸಮಿತಿಯ ವರದಿ ಬರುವವರೆಗೆ ಪರಿವರ್ತಿತ ಜಮೀನಿನಲ್ಲಿ ಗಣಿ ಉದ್ದೇಶಿತ ಬಳಕೆಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ವಿಧಿಸಿದ್ದ ಷರತ್ತು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಮಧ್ಯಂತರ ಅರ್ಜಿಗಳನ್ನು ಇತ್ಯರ್ಥಪಡಿಸಿದ ಪೀಠವು ಎಲ್ಲಾ ಮಧ್ಯಂತರ ಅರ್ಜಿದಾರರು ರಾಜ್ಯ ಅಣೆಕಟ್ಟು ಸುರಕ್ಷತಾ ಸಮಿತಿ ಮುಂದೆ ಮನವಿ ಸಲ್ಲಿಸಬಹುದು ಎಂದು ಹೇಳಿದೆ.