ಮನೆ ರಾಜಕೀಯ ಪ್ರೀತಂಗೌಡ ಪಾದಯಾತ್ರೆಯಲ್ಲಿ ಭಾಗವಹಿಸದಿದ್ದರೆ ಮಾತ್ರ ಜೆಡಿಎಸ್ ಭಾಗಿಯಾಗುತ್ತೆ: ಹೆಚ್ ​ಡಿ ಕುಮಾರಸ್ವಾಮಿ

ಪ್ರೀತಂಗೌಡ ಪಾದಯಾತ್ರೆಯಲ್ಲಿ ಭಾಗವಹಿಸದಿದ್ದರೆ ಮಾತ್ರ ಜೆಡಿಎಸ್ ಭಾಗಿಯಾಗುತ್ತೆ: ಹೆಚ್ ​ಡಿ ಕುಮಾರಸ್ವಾಮಿ

0

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಬೆಂಗಳೂರಿನಿಂದ ಮೈಸೂರಿನ ವರೆಗೆ ಪಾದಯಾತ್ರೆ ಮಾಡಿ ಸಿಎಂಗೆ ಬಿಸಿ ಮುಟ್ಟಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಆದರೆ ಈ ಪಾದಯಾತ್ರೆಯಲ್ಲಿ ಪ್ರೀತಂಗೌಡ ಭಾಗಿಯಾಗುತ್ತಿರುವ ಕಾರಣಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜೆಡಿಎಸ್​ ಪಕ್ಷದ ಯಾರೊಬ್ಬರೂ ಭಾಗಿಯಾಗುವುದಿಲ್ಲ ತಿಳಿಸಿದ್ದರು.

Join Our Whatsapp Group

ಆದರೆ ಇದೀಗ ಹೆಚ್​ಡಿಕೆ ಜೊತೆ ಚರ್ಚೆ ನಡೆಸಿರುವ ಜೆ.ಪಿ ನಡ್ಡಾ, ಪ್ರಹ್ಲಾದ್ ಜೋಷಿ ಅವರು ಮನವೊಲಿಸಿದ್ದಾರೆ. ಸದ್ಯ ಒಂದೇ ಒಂದು ಷರತ್ತನ್ನು ಮುಂದೆ ಇಟ್ಟು ಪಾದಯಾತ್ರೆಗೆ ಬರುವಂತೆ ಹೆಚ್​ಡಿಕೆ ತಿಳಿಸಿದ್ದಾರೆ.

ಭಾನುವಾರ ನಡೆದಿದ್ದ ಮೈತ್ರಿ ಸಭೆಯಲ್ಲೇ ಹೆಚ್​ಡಿ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದರು. ಬಿಜೆಪಿ-ಜೆಡಿಎಸ್ ಕೋರ್ ಕಮಿಟಿ ಸಮನ್ವಯ ಸಭೆ ಎಂದು ಸಭೆ ನಿಗದಿ ಮಾಡಲಾಗಿತ್ತು. ಆದರೆ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಗೌಡ ಮತ್ತು ಪಿ. ರಾಜೀವ್ ಹಾಜರಿದ್ರು. ಬಿಜೆಪಿ ಕೋರ್ ಕಮಿಟಿ ಸದಸ್ಯರಲ್ಲದ ಪ್ರೀತಂ ಮತ್ತು ರಾಜೀವ್ ಉಪಸ್ಥಿತಿಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ರು.

ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆ ಕರೆಯುತ್ತೀರಾ? ಪೆನ್ ಡ್ರೈವ್ ಹಂಚಿದೋರು ಯಾರು ಅಂಥ ಗೊತ್ತಿಲ್ವಾ? ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಕಿಡಿಕಾರಿದ್ದರು. ಬಳಿಕ ಬಿಜೆಪಿ ಪಾದಯಾತ್ರೆಯಲ್ಲಿ ಜೆಡಿಎಸ್​ನ ಯಾವ ಸದಸ್ಯರೂ ಹೋಗದಂತೆ ಜೆ‌.ಟಿ ದೇವೇಗೌಡರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಸದ್ಯ ಮೈತ್ರಿ ಪಕ್ಷದಲ್ಲಿ ಗೊಂದಲ ವ್ಯಕ್ತವಾದ ಹಿನ್ನೆಲೆ ಜೆ.ಪಿ ನಡ್ಡಾ, ಪ್ರಹ್ಲಾದ್ ಜೋಷಿ ಅವರು ಹೆಚ್​ಡಿ ಕುಮಾರಸ್ವಾಮಿ ಅವರ ಮನವೊಲಿಸಲು ಪ್ರಯತ್ನಿಸಿದ್ದು ಈ ವೇಳೆ ಹೆಚ್​ಡಿಕೆ ಒಂದು ಷರತ್ತು ಇಟ್ಟಿದ್ದಾರೆ. ಪ್ರೀತಂಗೌಡ ಪಾದಯಾತ್ರೆಯಲ್ಲಿ ಇರಬಾರದು. ಹಾಗಿದ್ದಾಗ ಮಾತ್ರ ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗುತ್ತೆ ಎಂದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಹೆಚ್​ಡಿಕೆ ಷರತ್ತು ಹಾಕಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.

ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು? ಪ್ರೀತಂಗೌಡ ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ. ಅಂತವರ ಜೊತೆಗೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ. ನಮ್ಮ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ವಿರುದ್ಧ ತೀರ್ಮಾನವಾಗಿದೆ ಎಂದು ಈ ಹಿಂದೆ ಹೆಚ್​ಡಿಕೆ ಆಕ್ರೋಶ ಹೊರ ಹಾಕಿದ್ದರು.