ನೆಲಮಂಗಲ: ಸಿನಿಮಾ ಶೈಲಿಯಲ್ಲಿ ಪಿಸ್ತೂಲು ತೋರಿಸಿ ಚಿನ್ನದ ಅಂಗಡಿ ದರೋಡೆ ಮಾಡಿದ್ದ ಅಂತರರಾಜ್ಯ ಖದೀಮರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ನಾರಾಯಣ ಲಾಲ್ (43) ರಾಮ್ ಲಾಲ್ (54) ಕಿಶೋರ್ ಪವರ್ (25)ಮಹೇಂದ್ರ ಗೆಲೋಟ್ (25) ಕೀರ್ತಾರಾಮ್ (42) ಅಶೋಕ್ ಕುಮಾರ್ (39) ಸೋಹನ್ ರಾಮ್ (32) ಬಂಧಿತ ಆರೋಪಿಗಳು.
ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ 417 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಿಸ್ತೂಲ್, ಒಂದು ಡ್ಯ್ರಾಗರ್, ಆಟೋ ರಿಕ್ಷಾ ಮತ್ತು ಒಂದು ಕೆಟಿಎಂ ಡ್ಯೂಕ್ ಬೈಕ್ ಜಪ್ತಿ ಮಾಡಲಾಗಿದೆ.
ಆರೋಪಿಗಳು ಇದೇ ವರ್ಷ ಜೂನ್ 26 ರಂದು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯ ದೊಂಬರಹಳ್ಳಿಯಲ್ಲಿನ ರಾಜು ಪದಮ್ ಎಂಬುವರಿಗೆ ಸೇರಿದ ಪದಮ್ ಚಿನ್ನದ ಅಂಗಡಿಗೆ ನುಗ್ಗಿದ್ದರು. ಅಲ್ಲಿನ ಸಿಬ್ಬಂದಿಗೆ ಪಿಸ್ತೂಲು ತೋರಿಸಿ ಪರಾರಿಯಾಗಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನೆಲಮಂಗಲ ಡಿವೈಎಸ್ಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮುರಳೀಧರ್ ಅವರ ನೇತೃತ್ವದಲ್ಲಿ ತಂಡ ತನಿಖೆಗೆ ಇಳಿಯುತ್ತದೆ. ಪೊಲೀಸ್ ತಂಡವು ಸಿಸಿಟಿವಿ ದೃಷ್ಯಾವಳಿಗಳು ಮತ್ತು ತಾಂತ್ರಿಕ ಆಯಾಮದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಪಡೆದಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಬೆಂಗಳೂರಿನಲ್ಲಿ ಚಿನ್ನದ ಅಂಗಡಿ ಮತ್ತು ಬಟ್ಟೆ ಹಾಗೂ ಕೆಮಿಕಲ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಬೆಂಗಳೂರು ಹಲಸೂರು ಗೇಟ್ ಮತ್ತು ಬೊರುಂಡಾ, ಜೋದ್‌ಪುರ್ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳು ದರೋಡೆ ಮಾಡಿದ್ದ ಚಿನ್ನಾಭರಣಗಳನ್ನು ಬೆಂಗಳೂರು ಮತ್ತು ರಾಜಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದರು.
ಬೆಂಗಳೂರು ನಗರದ ಹೊರವಲಯಗಳಲ್ಲಿ ದರೋಡೆ ಮಾಡಿದರೆ ಸಿಕ್ಕಿ ಹಾಕಿಕೊಳ್ಳುವುದಿಲ್ಲವೆಂದು ಯೋಜಿಸಿ ಅರೋಪಿಗಳು ಕೃತ್ಯವೆಸಗಿದ್ದಾರೆ. ದರೋಡೆಗೆಂದು ಕಂಟ್ರಿ ಮೇಡ್ ಪಿಸ್ತೂಲ್ ಅನ್ನು ಬಿಹಾರ ಮೂಲದ ಅಶೋಕನಿಂದ ರಾಜಸ್ಥಾನಕ್ಕೆ ತರಿಸಿಕೊಂಡಿದ್ದಾರೆ.