ಮನೆ ರಾಜಕೀಯ ಮುಡಾ ಹಗರಣ: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಇಂದು ಚಾಲನೆ – ಇಲ್ಲಿದೆ ಮಾಹಿತಿ

ಮುಡಾ ಹಗರಣ: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಇಂದು ಚಾಲನೆ – ಇಲ್ಲಿದೆ ಮಾಹಿತಿ

0

ಬೆಂಗಳೂರು: ಅಸಮಾಧಾನ ದೂರ ಮಾಡಿಕೊಂಡಿರುವ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್, ಮುಡಾ ಹಗರಣದ ವಿರುದ್ಧ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಮೈಸೂರು ಚಲೋ ಪಾದಯಾತ್ರೆಗೆ ಸಿದ್ಧವಾಗಿವೆ.

Join Our Whatsapp Group

ಪೂರ್ವನಿಗದಿಯಂತೆ ಇಂದಿನಿಂದ (ಆಗಸ್ಟ್ 3) ಆಗಸ್ಟ್​ 10ರವರೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಜಂಟಿ ಪಾದಯಾತ್ರೆ ನಡೆಯಲಿದೆ. 140 ಕಿ.ಮೀ. ಪಾದಯಾತ್ರೆ ಇದಾಗಿದೆ.

ಬಿಜೆಪಿ ರಾಜ್ಯ ಪದಾಧಿಕಾರಿಗಳು ಆಂತರಿಕ ಸಭೆ ನಡೆಸಿದ್ದು, ಮತ್ತೊಂದು ತಂಡ ಪಾದಯಾತ್ರೆ ಮಾರ್ಗಪಥದ ಸಮೀಕ್ಷೆ, ವಸತಿ, ಉಟೋಪಚಾರ ಸ್ಥಳ ಜೊತೆಗೆ ಬಹಿರಂಗ ಸಭೆಗಳಿಗೆ ಅಗತ್ಯ ಮೈದಾನ ಗುರುತಿಸಿ ಅಂತಿಮಗೊಳಿಸಿದೆ.

ಕೆಂಗೇರಿಯಿಂದ ಪಾದಯಾತ್ರೆ ಆರಂಭ: ಕೆಂಗೇರಿಯ ಕೆಂಪಮ್ಮ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿ, 8 ದಿನಗಳ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ ಸಭಾಮಂಟಪ ಹಾಗೂ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ. ಇಂದಿನ ಪಾದಯಾತ್ರೆ ಚಾಲನಾ ಕಾರ್ಯಕ್ರಮಕ್ಕೆ 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ನಿರ್ವಹಣೆಗೆ ವಿವಿಧ ಮೋರ್ಚಾಗಳ ಜೊತೆಗೆ ತಂಡಗಳು ರಚನೆಯಾಗಿವೆ. ಮೊದಲ ದಿನದ ಪಾದಯಾತ್ರೆಯನ್ನು ಯುವ ಮೋರ್ಚಾ ನಿರ್ವಹಿಸಲಿದೆ.

ಬಹಿರಂಗ ಸಭೆಗಳು: ಕೆಂಗೇರಿಯಲ್ಲಿ ಉದ್ಘಾಟನೆ, ಮೈಸೂರಿನ ಸಮಾರೋಪ ಕಾರ್ಯಕ್ರಮ ಹೊರತುಪಡಿಸಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆಗಳು ನಡೆಯಲಿವೆ. ಬೆಳಗ್ಗೆ 10 ಕಿ.ಮೀ. ಮಧ್ಯಾಹ್ನ ಊಟದ ನಂತರ 10 ಕೀ.ಮೀನಂತೆ ಪ್ರತಿದಿನ 20 ಕಿ.ಮೀ. ಕ್ರಮಿಸಲು ಯೋಜಿಸಲಾಗಿದೆ.

ವಿಧಾನಸಭೆ ಕ್ಷೇತ್ರವಾರು 200 ಜನರು ಸೇರಿ ಪ್ರತಿದಿನ ಐದಾರು ಸಾವಿರ ಜನರು ಭಾಗಹಿಸಲಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಪದಾಧಿಕಾರಿಗಳು ಏಳು ದಿನವೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಯಶಸ್ಸಿಗೆ 20ರಿಂದ 22 ವಿಭಾಗಗಳನ್ನು ರಚಿಸಲಾಗಿದೆ. ಆಗಸ್ಟ್​ 10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಜೆಡಿಎಸ್ ಸಿದ್ಧತೆ: ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಜೆಡಿಎಸ್ ಪಕ್ಷದ ಮುಖಂಡರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ವಿವಿಧ ವಿಭಾಗಗಳ ರಾಜ್ಯಾಧ್ಯಕ್ಷರು ಹಾಗೂ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕಾಗಿ ಮಾಜಿ ಸಚಿವ, ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ ಮನವಿ ಮಾಡಿದ್ದಾರೆ.

ಬಿಗಿ ಭದ್ರತೆ: ಕೆಂಗೇರಿಯ ನೈಸ್ ರಸ್ತೆ ಸಮೀಪದ ಕೆಂಪಮ್ಮದೇವಿ ದೇವಸ್ಥಾನ ಬಳಿ ಪಾದಯಾತ್ರೆಗೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಏರ್ಪಡುವ ಸಾಧ್ಯತೆಯಿದೆ. ಮೈಸೂರು ರಸ್ತೆ ಮಾರ್ಗದಲ್ಲಿ ಬೆಳಗ್ಗೆ ತೆರಳುವವರು ಹಾಗೂ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಸಂಚಾರ ದಟ್ಟಣೆಯ ಬಿಸಿ ತಟ್ಟಲಿದೆ. ಪಾದಯಾತ್ರೆ ಆರಂಭವಾಗುವ ಸ್ಥಳದ ಬಳಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸ್ ವಿಭಾಗದ ಮೂವರು ಇನ್‌ಸ್ಪೆಕ್ಟ‌ರ್ ಹಾಗೂ 50 ಸಿಬ್ಬಂದಿ ನಿಯೋಜಿಸಲಾಗಿದೆ. ಉಳಿದಂತೆ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.