ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಳಿದ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು, ಇದು ನನ್ನ ಹಾಗೂ ಹಲವು ಶಾಸಕರ ಅಭಿಪ್ರಾಯವಾಗಿದೆ ಎಂದು ಸಿ.ಎಂ. ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಪ್ರಕರಣ ವಿಷಯದಲ್ಲಿ ಮುಖ್ಯಮಂತ್ರಿ ಅವರ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ ನಡೆಸುತ್ತಿದ್ದು, ಇದಕ್ಕೆ ನಾವು ಬಗ್ಗುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಬರುವುದಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯಪಾಲರು ಅನುಮತಿ ಕೊಟ್ಟರೆ ಕಾನೂನು ಹೋರಾಟ ನಡೆಸಲು ಹೈಕೋರ್ಟ್ ಮೊರೆ ಹೋಗಲಾಗುವುದು ಎಂದರು.
ಕಾಂಗ್ರೆಸ್ ಪಕ್ಷದ ಲಿಂಗಾಯತ ಹಾಗೂ ಒಕ್ಕಲಿಗ ಸೇರಿ ಎಲ್ಲ ಸಮುದಾಯಗಳ ಶಾಸಕರು ಸಿದ್ದರಾಮಯ್ಯ ಅವರ ಜೊತೆ ಇದ್ದೇವೆ. ಮುಡಾ ವಿಷಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ರಾಜೇನಾಮೆ ಕೊಡಲೂಬಾರದು ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಹಗರಣಗಳನ್ನು ಮರೆಮಾಚಲು ಸಿ.ಎಂ. ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈ ಎರಡೂ ಪಕ್ಷಗಳು ಜಾತಿ ಮುಂದಿಟ್ಟು ಹೋರಾಟ ಮಾಡುತ್ತಿವೆ. ಆದ್ದರಿಂದ ಸಿದ್ದರಾಮಯ್ಯ ಕೂಡ ಜಾತಿ ವಿಷಯವನ್ನು ಮುನ್ನಲೆಗೆ ತಂದರು ಎಂದರು.
ರಾಜ್ಯ ಸರ್ಕಾರವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಇದು ಸಾಧ್ಯವೂ ಆಗುವುದಿಲ್ಲ ಎಂದರು.
ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ ಇದ್ದರು.