ಮನೆ ಕಾನೂನು ದೆಹಲಿಯ ಆಡಳಿತಾತ್ಮಕ, ಭೌತಿಕ, ಆರ್ಥಿಕ ಮೂಲಸೌಕರ್ಯ ಪರಿಶೀಲನೆ ಹಾಗೂ ಸುಧಾರಣೆ: ಸಮಿತಿ ರಚಿಸಿದ ಹೈಕೋರ್ಟ್

ದೆಹಲಿಯ ಆಡಳಿತಾತ್ಮಕ, ಭೌತಿಕ, ಆರ್ಥಿಕ ಮೂಲಸೌಕರ್ಯ ಪರಿಶೀಲನೆ ಹಾಗೂ ಸುಧಾರಣೆ: ಸಮಿತಿ ರಚಿಸಿದ ಹೈಕೋರ್ಟ್

0

ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾತ್ಮಕ, ಹಣಕಾಸು ಮತ್ತು ಭೌತಿಕ ಮೂಲಸೌಕರ್ಯಗಳನ್ನು ಪರಿಶೀಲಿಸಿ ಸುಧಾರಣೆ ತರುವುದಕ್ಕಾಗಿ ದೆಹಲಿ ಹೈಕೋರ್ಟ್ ಶುಕ್ರವಾರ ಸಮಿತಿಯೊಂದನ್ನು ರಚಿಸಿದೆ .

Join Our Whatsapp Group

ರಾಜೇಂದ್ರ ನಗರ ಪ್ರದೇಶದ ಕೋಚಿಂಗ್ ಕೇಂದ್ರದಲ್ಲಿ ನೆಲಮಾಳಿಗೆಯಲ್ಲಿ ಮೂವರು ಯುಪಿಎಸ್‌ಸಿ ಹುದ್ದೆ ಆಕಾಂಕ್ಷಿಗಳ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಕುಟುಂಬ್ ಹೆಸರಿನ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ  (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಸಮಿತಿ ರಚನೆಯ ಆದೇಶ ಹೊರಡಿಸಿತು.

ದೆಹಲಿ ಒಂದು ಬಿಕ್ಕಟ್ಟಿನಿಂದ ಮತ್ತೊಂದು ಬಿಕ್ಕಟ್ಟಿಗೆ ಹೊರಳುತ್ತಿದ್ದರೂ ಸರ್ಕಾರ ಮತ್ತು ಪೌರ ಸಂಸ್ಥೆಗಳು ಬೇರೆಯವರ ಮೇಲೆ ಹೊಣೆ ಹೊರಿಸುತ್ತಿರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಸಮಿತಿ ರಚನೆಯ ಆದೇಶ ನೀಡಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಮಾರ್ಚ್ ತಿಂಗಳಿನಿಂದ ಒಂದೇ ಒಂದು ಸಚಿವ ಸಂಪುಟ ಸಭೆ ನಡೆಸಲು ದೆಹಲಿ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಇದೇ ವೇಳೆ ಟೀಕಿಸಿದೆ.

ಸಮಿತಿಯ ನೇತೃತ್ವವನ್ನು ದೆಹಲಿ ಮುಖ್ಯ ಕಾರ್ಯದರ್ಶಿ ಅವರಿಗೆ ನೀಡಲಾಗಿದ್ದು ದೆಹಲಿ ಪೊಲೀಸ್ ಕಮಿಷನರ್, ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಉಪಾಧ್ಯಕ್ಷರು ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ ಆಯುಕ್ತರು ಅದರ ಸದಸ್ಯರಾಗಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಎಂಟು ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

ದೆಹಲಿ ಒಂದು ಬಿಕ್ಕಟ್ಟಿನಿಂದ ಮತ್ತೊಂದಕ್ಕೆ ಹೊರಳುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಒಂದು ದಿನ ಬರ ಇದ್ದರೆ ಮತ್ತೊಂದ ದಿನ ಪ್ರವಾಹ ಇರುತ್ತದೆ. ದೆಹಲಿಯ ಆಡಳಿತಾತ್ಮಕ, ಭೌತಿಕ, ಆರ್ಥಿಕ ಮೂಲಸೌಕರ್ಯ ಪರಿಶೀಲನೆ ಹಾಗೂ ಸುಧಾರಣೆಗೆ ಇದು ಸಕಾಲ ಎಂದು ಅದು ಹೇಳಿತು. 

ದೆಹಲಿ ನಗರದ ಭೌತಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಮೂಲಸೌಕರ್ಯಗಳೆಲ್ಲವೂ ಹಳತಾಗಿದೆಯೇ ಹೊರತು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಇಲ್ಲ. ಹೀಗಾಗಿ ಅಲ್ಲಿ ಮೂಲಭೂತ ಸಮಸ್ಯೆ ಇದೆ ಎಂದು ಅದು ಬೇಸರ ವ್ಯಕ್ತಪಡಿಸಿತು.

ಮೂರು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ದೆಹಲಿಗೆ ಹೆಚ್ಚು ದೃಢವಾದ ಭೌತಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಮೂಲಸೌಕರ್ಯ ಅಗತ್ಯವಿದೆ. ವಿವಿಧ ಸಬ್ಸಿಡಿ ಯೋಜನೆಗಳಿಂದಾಗಿ, ದೆಹಲಿಗೆ ವಲಸೆ ಹೆಚ್ಚಿ ಅದರ ಜನಸಂಖ್ಯೆಯೂ ಹೆಚ್ಚುತ್ತಿದೆ. ದೆಹಲಿ ಪಾಲಿಕೆಯ ಆರ್ಥಿಕ ಸ್ಥಿತಿ ಸರಿಯಾಗಿಲ್ಲ. ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಪೌರ ಸಂಸ್ಥೆಗಳ ಬಳಿ ಹಣವಿಲ್ಲ. ಭೌತಿಕ ಮೂಲಸೌಕರ್ಯವನ್ನು ಸುಮಾರು 75 ವರ್ಷಗಳ ಹಿಂದೆ ಕಲ್ಪಿಸಲಾಗಿತ್ತು. ಮೂಲಸೌಕರ್ಯಗಳು ಅಸಮರ್ಪಕವಾಗಿರುವುದು ಮಾತ್ರವಲ್ಲದೆ ಕಳಪೆ ನಿರ್ವಹಣೆಯೂ ಇದೆ. ಇತ್ತೀಚಿನ ದುರಂತಗಳು ನ್ಯಾಯಾಲಯದ ಆದೇಶಗಳು ಜಾರಿಗೆ ಬರುತ್ತಿಲ್ಲ ಮತ್ತು ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿದೆ” ಎಂದು ಸಿಡಿಮಿಡಿಗೊಂಡಿತು.

ಯುಪಿಎಸ್‌ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದವರ ಸಾವಿನ ಕುರಿತು ದೆಹಲಿ ಪೊಲೀಸರ ತನಿಖೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿತು.