200 ಕಿಮೀ ರಸ್ತೆ ಮಾರ್ಗ: ಮಾದುದ್ದಕ್ಕೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ
ಮೈಸೂರು : ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿಗಳು ಮಾರ್ಗದುದ್ದಕ್ಕೂ ನಾನಾ ರಸ್ತೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಮುಖ್ಯಮಂತ್ರಿಗಳ ಕಾರು ಬಿಳಿಕೆರೆ ಕ್ರಾಸ್ ಸಮೀಪಿಸುತ್ತಿದ್ದಂತೆ ಬಿಳಿಕೆರೆ ಕ್ರಾಸ್ ನಿಂದ ಯಡಗೊಂಡನಹಳ್ಳಿ ವರೆಗಿನ 41ಕಿಮೀ ಉದ್ದದ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ಪಡೆದರು.
600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂತು.
ಮಾರ್ಗದಲ್ಲಿ ಅಲ್ಲಲ್ಲಿ ಕಾಣಿಸಿದ ರಸ್ತೆ ಗುಂಡಿಗಳಿಗೆ ಗರಂ ಆದ ಮುಖ್ಯಮಂತ್ರಿಗಳು, ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಳೆ ಇಲ್ಲದ ಸಮಯ ನೋಡಿಕೊಂಡು ಗುಂಡಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.
ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸೂಚನೆ
ಹೊಳೆ ನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಮಾರ್ಗವಾಗಿ ಸಾಗಿತ್ತಿದ್ದಂತೆ ಅಪಾಯದ ಸೂಚನೆ ನೀಡುತ್ತಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವೈರ್ ಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಧೂರವಾಣಿ ಮೂಲಕವೇ ಸೂಚಿಸಿದರು.
ಹಳ್ಳಿ ಮೈಸೂರು ಹಾದು ಹೋಗುವಾಗ ಹಾಳಾಗಿದ್ದ ರಸ್ತೆ ವಿಭಜಕಗಳನ್ನು ಗುರುತಿಸಿ ಸರಿ ಪಡಿಸಲು ಸೂಚನೆ ನೀಡಿದರು.
ನಾನು ಹುಟ್ಟು ಹಬ್ಬ ಮಾಡಲ್ಲ: ಇವೆಲ್ಲಾ ಯಾಕೆ ತಂದ್ರಿ?
ಮಾರ್ಗದುದ್ದಕ್ಕೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಲು ಹಾರ ತುರಾಯಿ, ಶಾಲುಗಳ ಸಮೇತ ಅಲ್ಲಲ್ಲಿ ಕಾದಿದ್ದರು. ಯಾವುದನ್ನೂ ಸ್ವೀಕರಿಸದ ಸಿಎಂ, ನಾನು ಹುಟ್ಟು ಹಬ್ಬ ಆಚರಿಸಲ್ಲ ಎಂದು ಕೈ ಬೀಸಿ, ಕೈ ಮುಗಿದು ಮುಂದೆ ಸಾಗಿದರು.