ಮನೆ ಸ್ಥಳೀಯ ರಾಜಕೀಯ ಪಕ್ಷಗಳ ಪಾದಯಾತ್ರೆಗೆ ಬೆಂಬಲವಿಲ್ಲ: ರೈತ ಮುಖಂಡರ ಸ್ಪಷ್ಟನೆ

ರಾಜಕೀಯ ಪಕ್ಷಗಳ ಪಾದಯಾತ್ರೆಗೆ ಬೆಂಬಲವಿಲ್ಲ: ರೈತ ಮುಖಂಡರ ಸ್ಪಷ್ಟನೆ

ಪಾದಯಾತ್ರೆ ಬಿಡಿ, ಸಾಲಮನ್ನಾ ಮಾಡಿ: ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಹೇಳಿಕೆ

0

ಮೈಸೂರು : ರಾಜ್ಯದಲ್ಲಿ ಅತೀವೃಷ್ಠಿ, ಪ್ರವಾಹ, ಮಳೆ ಗಾಳಿಯಿಂದ ಅನ್ನದಾತರಾದ ರೈತರು ಬೆಳೆ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಕಷ್ಟ ಸುಖಗಳನ್ನು ವಿಚಾರಿಸುವ ಬದಲು ಆಡಳಿತ ಮತ್ತು ವಿರೋಧ ಪಕ್ಷಗಳು ಪಾದಯಾತ್ರೆ ಎಂಬ ನಾಟಕದಲ್ಲಿ ತೊಡಗಿದ್ದಾರೆಂದು ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ದೂರಿದರು.

Join Our Whatsapp Group

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತಸಂಘ(ರೈತಬಣ) ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗಷ್ಟೇ ರಾಜ್ಯದ ರೈತಾಪಿ ಜನರು ಭೀಕರ ಬರಗಾಲದಿಂದ ತತ್ತರಿಸಿ ಸುಧಾರಿಸಿಕೊಳ್ಳುವಷ್ಟರಲ್ಲೇ ಅತೀವೃಷ್ಠಿಗೆ ಬಲಿಯಾಗಿದ್ದಾರೆ. ವಿಶೇಷವಾಗಿ ಮೈಸೂರು ಜಿಲ್ಲೆಯಲ್ಲಿ ಭಾರಿ ಬಿರುಗಾಳಿ ಮಳೆಗೆ ನೂರಾರು ಎಕರೆ ಬಾಳೆ, ಅಡಕೆ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳು ನೆಲಕಚ್ಚಿ ರೈತರು ಬೀದಿಗೆ ಬಿದ್ದಿದ್ದಾರೆ. ರೈತರ ಬೆಳೆಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ರೈತನ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ನೋವಿದೆ. ಮತ್ತೊಂದೆಡೆ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರ ಶೋಷಣೆ ಮುಂದುವರಿದಿದೆ. ಕಾಡು ಪ್ರಾಣಿಗಳ ದಾಳಿಯಿಂದಲೂ ರೈತ ಬೆಳೆಯ ಜತೆ ತನ್ನ ಪ್ರಾಣವನ್ನೂ ಸಹ ಕಳೆದುಕೊಳ್ಳುತ್ತಿದ್ದಾನೆ. ವಿದ್ಯುತ್ ಮೀಟರ್ ಸಮಸ್ಯೆ, ಕರಾಳ ಕೃಷಿ ಕಾಯ್ದೆಗಳು ಸೇರಿದಂತೆ ರೈತರ ಹತ್ತು ಹಲವಾರು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಬದಲು ಅಥವಾ ವಿರೋಧ ಪಕ್ಷಗಳು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ಬದಲು ಮುಡಾ ವಿಚಾರ ಮುಂದಿಟ್ಟುಕೊಂಡು ರೈತರ ಸಮಸ್ಯೆಗಳನ್ನು ಮರೆಮಾಚುತ್ತಿವೆ. ಕೂಡಲೇ ತಮ್ಮ ಪಾದಯಾತ್ರೆಗಳೆಂಬ ನಾಟಕ ನಿಲ್ಲಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಪಾದಯಾತ್ರೆ ಎಂಬ ರಾಜಕೀಯ ನಾಟಕ ಬದಿಗೊತ್ತಿ, ರೈತರ ಸಂಪೂರ್ಣ ಸಾಲಮನ್ನಾಕ್ಕೆ ವಿರೋಧ ಪಕ್ಷಗಳ ಒತ್ತಾಯಿಸಬೇಕೆಂದು ಕೃಷ್ಣೇಗೌಡ ಕಿಡಿ ಕಾರಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸರ್ಕಾರ ವಿದ್ಯುತ್ ಮೀಟರ್ ಸಂಖ್ಯೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮೂಲಕ ರೈತರ ಕುಟುಂಬಗಳನ್ನು ಒಡೆಯಲು ಮುಂದಾಗಿದೆ. ಅಂತರ್ಜಲ ಕುಸಿದು ೧೫೦೦ ಅಡಿ ಬೋರ್‌ವೆಲ್ ಕೊರೆದು ನೀರು ಎತ್ತಬೇಕಿದೆ. ಇದಕ್ಕಾಗಿ ರೈತರು ೨೫ ಹೆಚ್‌ಪಿ ಮೋಟರ್ ಅಳವಡಿಕೊಂಡಿದ್ದಾರೆ. ಈ ನಡುವೆ ೧೦ ಹೆಚ್‌ಪಿ ವಿದ್ಯುತ್ ಮಾತ್ರ ಉಚಿತ ಎಂದು ಸರ್ಕಾರ ಘೋಷಣೆ ಮಾಡಿರುವುದು ಸರಿಯಲ್ಲ. ಕೂಡಲೇ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪೂರ್ಣ ವಿದ್ಯುತ್ ಉಚಿತ ಎಂದು ಘೊಷಣೆ ಮಾಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಮೈಸೂರು ಜಿಲ್ಲಾ ಕಾರ್ಯಾಧ್ಯಕ್ಷರಾದ ಮಲ್ಲಿಕ್ ಆವರ್ತಿ ಮಾತನಾಡಿ, ಮುಡಾ ನಿವೇಶನಗಳ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ರೈತನ ಭೂಮಿ ಕಬಳಿಸಿ ಅಧಿಕಾರಿಗಳು, ಜನ ಪ್ರತಿನಿಧಿಗಳು ರಾಜ್ಯಭಾರ ಮಾಡುತ್ತಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯದ ಜಮೀನುಗಳನ್ನೂ ಈ ಅಧಿಕಾರಿಗಳು, ಮುಖಂಡರು ಬಿಟ್ಟಿಲ್ಲ. ರೈತರನ್ನು ಬೀದಿ ಪಾಲು ಮಾಡಿದ್ದಾರೆ. ಕೃಷಿ ಪಂಪ್‌ಸೆಟ್ ಮೀಟರ್‌ಗೆ ಆಧಾರ್ ಲಿಂಕ್ ಮಾಡಲು ಬಂದರೆ ಕೃಷಿಕರು ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಅರುಣ್ ಕುಮಾರ್, ಹೆಮ್ಮಿಗೆ ಚಂದ್ರಶೇಖರ್, ಕೆಂಪರಾಜು, ದಯಾನಂದ, ನಾಗವೇಣಿ, ಅದೃಶ್ಯ ಮ. ಬೆಳ್ಳಿಕಟ್ಟೆ, ಮಂಜು ಪಾಳ್ಯ ಉಪಸ್ಥಿತರಿದ್ದರು.