ಸುದೀರ್ಘ ನ್ಯಾಯಾಲಯ ಪ್ರಕ್ರಿಯೆಗಳಿಂದ ಬೇಸರಗೊಂಡಿರುವ ಜನ ಪ್ರಕರಣದ ಇತ್ಯರ್ಥ ತಮಗೆ ಹೆಚ್ಚು ಉಪಯುಕ್ತವಾಗದಿದ್ದರೂ ಅಂತಹ ಇತ್ಯರ್ಥಕ್ಕೇ ಜೋತುಬೀಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಬೇಸರ ವ್ಯಕ್ತಪಡಿಸಿದರು.
ಜುಲೈ 29 ರಿಂದ ಆಗಸ್ಟ್ 2 ರವರೆಗೆ ನಡೆದ ಲೋಕ್ ಅದಾಲತ್ ಅಂಗವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ವೋಚ್ಚ ನ್ಯಾಯಾಲಯದ ವಿವಿಧ ಪೀಠಗಳು 1,000 ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಕ್ಕೆ ಈ ಬಾರಿಯ ಲೋಕ್ ಅದಾಲತ್ ಸಾಕ್ಷಿಯಾಗಿದೆ.
ನ್ಯಾಯಾಲಯ ಪ್ರಕ್ರಿಯೆಗಳು ಬಹುತೇಕ ವೇಳೆ ಶಿಕ್ಷೆಯಾಗಿ ಪರಿಣಮಿಸಲಿದ್ದು ಅವರು ನ್ಯಾಯಾಲಯಗಳಿಂದ ದೂರವಿರಬೇಕು ಎಂದು ಯೋಚಿಸಲಾರಂಭಿಸುತ್ತಾರೆ ಎಂಬುದಾಗಿ ಅವರು ತಿಳಿಸಿದರು.
ಜನರು ಸಾಮಾನ್ಯವಾಗಿ ನ್ಯಾಯಾಲಯದ ವಿಚಾರಣೆಗಳಿಂದ ಬೇಸರಗೊಂಡಿದ್ದು ನ್ಯಾಯಾಲಯಗಳಿಂದ ಸಾಧ್ಯವಿರುವ ಯಾವುದೇ ಪರಿಹಾರಕ್ಕಾದರೂ ಜೋತು ಬೀಳುತ್ತಾರೆ. ಆದಷ್ಟೂ ನ್ಯಾಯಾಲಯಗಳಿಂದ ದೂರ ಇರೋಣ ಎಂದುಕೊಳ್ಳುತ್ತಾರೆ ಎಂದರು.
ನ್ಯಾಯಾಲಯ ಪ್ರಕ್ರಿಯೆಗಳು ಶಿಕ್ಷೆಯಾಗಿ ಪರಿಣಮಿಸಿದ್ದು ನ್ಯಾಯಾಧೀಶರಿಗೆ ಕಳವಳ ಹುಟ್ಟಿಸುವಂತಹ ವಿಚಾರವಾಗಿದೆ ಎಂದು ಹೇಳಿದರು.
ಮಧ್ಯಸ್ಥಿಕೆ ಮತ್ತು ಲೋಕ ಅದಾಲತ್ ಮೂಲಕ ವಿವಾದಗಳ ಇತ್ಯರ್ಥ ವ್ಯವಸ್ಥಿತ ಅಸಮಾನತೆಗಳನ್ನು ಒಳಗೊಂಡಿರುವುದರಿಂದ ಲೋಕ ಅದಾಲತ್ ಭಾಗವಾಗಿ ವಿಚಾರಣೆ ನಡೆಸುವ ನ್ಯಾಯಾಧೀಶರು ಕಕ್ಷಿದಾರರು ಸಿದ್ಧರಿದ್ದರೂ ಕೂಡ ಸಣ್ಣ ಮೊತ್ತಕ್ಕೆ ಪ್ರಕರಣ ಇತ್ಯರ್ಥಗೊಳಿಸಲು ಒಪ್ಪುವುದಿಲ್ಲ ಎಂದರು.
ಸುಪ್ರೀಂ ಕೋರ್ಟ್ ಎದುರು ದಾವೆದಾರರು ಕಾಣಿಸಿಕೊಳ್ಳದಿರುವ ಸಾಮಾನ್ಯವಾಗಿ ವಕೀಲರ ಮೂಲಕವೇ ವಿಚಾರಣೆ ನಡೆಯುವ ಅದೃಶ್ಯತೆಯ ಸಮಸ್ಯೆಯನ್ನು ಅವರು ಇದೇ ವೇಳೆ ಪ್ರಸ್ತಾಪಿಸಿದರು. ಆದರೂ ಅನುಭವಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಈ ಸಮಸ್ಯೆಯನ್ನು ನಿಭಾಯಿಸುತ್ತಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಲೋಕ ಅದಾಲತ್ ಪ್ರಕ್ರಿಯೆಯಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಮೊದಲ ಬಾರಿಗೆ ಒಟ್ಟಿಗೆ ಪೀಠದಲ್ಲಿ ವಿಷಯಗಳನ್ನು ಆಲಿಸಿದ್ದನ್ನು ಉಲ್ಲೇಖಿಸಿದ ಅವರು ಈ ಪ್ರಕ್ರಿಯೆ ಸಂಸ್ಥೆಯ ಮೇಲೆ ವಕೀಲರಿಗೆ ಮಾಲೀಕತ್ವವ ನೀಡುವುದಾಗಿದೆಯೇ ವಿನಾ ನ್ಯಾಯಮೂರ್ತಿಗಳಿಗೆ ಅಲ್ಲ ಎಂಬುದರ ಧ್ಯೋತಕ ಎಂದರು.
ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಇರಬಹುದಾದರೂ ಅದು ದೆಹಲಿಯ ಸುಪ್ರೀಂ ಕೋರ್ಟ್ ಅಲ್ಲ ಬದಲಿಗೆ ಭಾರತದ ಸುಪ್ರೀಂ ಕೋರ್ಟ್. ಸರ್ವೋಚ್ಚ ನ್ಯಾಯಾಲಯದ ನೋಂದಣಿ ಅಧಿಕಾರಿಗಳು ದೇಶದೆಲ್ಲೆಡೆ ಇದ್ದಾರೆ ಎಂದು ಸಿಜೆಐ ಹೇಳಿದರು.














