ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ ಆಗಸ್ಟ್ 12ರ – ವಿಶ್ವ ಆನೆಯ ದಿನದಂದು ಮಾನವ- ಆನೆ ಸಂಘರ್ಷ ಕುರಿತಂತೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಸಮ್ಮೇಳನ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಒಂದು ದಿನದ ಅಂ.ರಾ.ಸಮ್ಮೇಳನದಲ್ಲಿ ಅಮೆರಿಕಾ, ಜರ್ಮನಿ, ಜಪಾನ್, ಯುಕೆ ಸೇರಿದಂತೆ 11 ರಾಷ್ಟ್ರಗಳ ಸುಮಾರು 17ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅನ್ಯ ರಾಷ್ಟ್ರ, ರಾಜ್ಯಗಳ ಉತ್ತಮ ರೂಢಿಯ ಅಳವಡಿಕೆ:
ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ. ಯಾವ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳಲು ಈ ಸಮ್ಮೇಳನ ಸಹಕಾರಿ ಎಂದು ತಿಳಿಸಿದರು.
ಸಮ್ಮೇಳನ ಏಕೆ?
ಕರ್ನಾಟಕ ಸರ್ಕಾರ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ 6395 ಆನೆಗಳಿದ್ದು, ರಾಜ್ಯ ದೇಶದಲ್ಲೇ ಗಜ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿ ಎಂಬ ಉದ್ದೇಶದಿಂದ ಆಯೋಜನೆ ಮಾಡಲಾಗಿದೆ ಎಂದರು.
ದೇಶದಲ್ಲಿ ಆನೆಗಳಿಂದ ಅತಿ ಹೆಚ್ಚು ಸಾವು ಒಡಿಶಾದಲ್ಲಿ ಸಂಭವಿಸುತ್ತದೆ. 2023-24ರಲ್ಲಿ 149 ಜನರು ಒಡಿಶಾದಲ್ಲಿ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ದಾಳಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ಪ್ರತಿಯೊಂದು ಜೀವವೂ ಅಮೂಲ್ಯ ಈ ನಿಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಜನವರಿಯಲ್ಲಿ 3, ಫೆಬ್ರವರಿಯಲ್ಲಿ 4, ಮಾರ್ಚ್ ನಲ್ಲಿ 7, ಏಪ್ರಿಲ್ ನಲ್ಲಿ 7, ಮೇ ತಿಂಗಳಲ್ಲಿ 1, (ಜೂನ್ ನಲ್ಲಿ 0), ಜುಲೈನಲ್ಲಿ 03 ಜನರು ಆನೆಯ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆವಾಸಸ್ಥಾನ ರಕ್ಷಣೆ:
ಜನರ ಜೀವವೂ ಅಮೂಲ್ಯ. ಅದೇ ರೀತಿ ವನ್ಯ ಜೀವಿಗಳ ಪ್ರಾಣವೂ ಅಮೂಲ್ಯ. ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಮಾಡಬೇಕಾದರೆ ನಾವು ಮೊದಲಿಗೆ ವನ್ಯ ಜೀವಿಗಳ ಆವಾಸಸ್ಥಾನವನ್ನು ಸಂರಕ್ಷಿಸಬೇಕು ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ದೇಶದಲ್ಲಿ 2009ರಿಂದ 2023ರ ನಡುವೆ ಒಟ್ಟಾರೆ ಸುಮಾರು 1381 ಆನೆಗಳು ಅಸಹಜ ಸಾವು ಕಂಡಿವೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 283 ಆನೆಗಳು ಮೃತಪಟ್ಟಿವೆ. ಈ ಪೈಕಿ ವಿದ್ಯುತ್ ಸ್ಪರ್ಶದಿಂದ 30ಕ್ಕೂ ಹೆಚ್ಚು ಆನೆಗಳು ಸಾವಿಗೀಡಾಗಿದ್ದರೆ, 6 ಆನೆಗಳ ಬೇಟೆ ಆಗಿದೆ. ರಾಜ್ಯದಲ್ಲಿ 2021-22ರಲ್ಲಿ 82, 2022-23ರಲ್ಲಿ 72, 2023-24ರಲ್ಲಿ 97, 2024-25ರಲ್ಲಿ ಇಲ್ಲಿಯವರೆಗೆ 36 ಆನೆಗಳು ಸಾವಿಗೀಡಾಗಿವೆ. ಕಳೆದ ಜನವರಿಯಿಂದೀಚೆಗೆ 36 ಆನೆಗಳು ಮೃತಪಟ್ಟಿವೆ. ಜನವರಿಯಲ್ಲಿ 2, ಫೆಬ್ರವರಿಯಲ್ಲಿ 6, ಮಾರ್ಚ್ ನಲ್ಲಿ 7, ಏಪ್ರಿಲ್ ನಲ್ಲಿ 5, ಮೇ ತಿಂಗಳಲ್ಲಿ 13, ಜೂನ್ ನಲ್ಲಿ 2 ಮತ್ತು ಜುಲೈನಲ್ಲಿ 01 ಆನೆಗಳು ಮೃತಪಟ್ಟಿವೆ. ಈ ಪೈಕಿ ಅಸಹಜ ಸಾವಿನ ಸಂಖ್ಯೆ 5 ಎಂದು ವಿವರಿಸಿದರು.
ಆನೆಗಳ ರಕ್ಷಣೆ ಮತ್ತು ಆನೆಗಳಿಂದ ಜೀವಹಾನಿ ಮತ್ತು ಬೆಳೆ ಹಾನಿ ತಪ್ಪಿಸಲು ಆನೆ ಕಂದಕ ನಿರ್ಮಾಣ, ಟೆಂಟಕಲ್ ಫೆನ್ಸಿಂಗ್ ಅಂದರೆ ತೂಗಾಡುವ ಸೌರ ವಿದ್ಯುತ್ ತಂತಿಗಳು, ಸೌರ ಬೇಲಿ ಅಳವಡಿಕೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದರೆ, 3,426 ಕಿ.ಮೀ ಸೌರ ಬೇಲಿ ಅಳವಡಿಸಲಾಗಿದೆ. 2,420 ಕಿ.ಮೀ. ಆನೆ ನಿಗ್ರಹ ಕಂದಕ -ಇಟಿಪಿ (ಎಲಿಫೆಂಟ್ ಫ್ರೂಫ್ ಟ್ರಂಚಸ್) ನಿರ್ಮಾಣ ಮಾಡಲಾಗಿದೆ ಎಂದು ವಿವರ ನೀಡಿದರು.
ಆನೆ ಕಾರ್ಯಪಡೆ:
ಆನೆಗಳು ನಾಡಿಗೆ ಬಂದಾಗ ಅವುಗಳನ್ನು ಮರಳಿ ಕಾಡಿಗೆ ಕಳುಹಿಸಲು ರಾಪಿಡ್ ರೆಸ್ಪಾನ್ಸ್ ಟೀಮ್ -ಆರ್.ಆರ್.ಟಿ. ಅಂದರೆ ಕ್ಷಿಪ್ರ ಸ್ಪಂದನಾ ಪಡೆಗಳು, ಎಲಿಫೆಂಟ್ ಟಾಸ್ಕ್ ಫೋರ್ಸ್ -ಇ.ಟಿ.ಎಫ್. ಅಂದರೆ ಆನೆ ಕಾರ್ಯ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದ ಈಶ್ವರ ಖಂಡ್ರೆ, ತಾವು ಅರಣ್ಯ ಸಚಿವರಾದ ತರುವಾಯ ಬೆಂಗಳೂರು ಗ್ರಾಮಾಂತರ ಬನ್ನೇರುಘಟ್ಟ ಮತ್ತು ರಾಮನಗರದಲ್ಲಿ ಎರಡು ಆನೆ ಕಾರ್ಯಪಡೆಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಿದ್ದಾಗಿ ತಿಳಿಸಿದರು.
ಪ್ರಸ್ತುತ ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ರಾಮನಗರ, ಬನ್ನೇರುಘಟ್ಟ, ಬಂಡೀಪುರ ಸೇರಿ 8 ಜಿಲ್ಲೆಗಳಲ್ಲಿ ಕಾರ್ಯಪಡೆಗಳಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಆನೆಗಳ ಚಲನ ವಲನದ ಬಗ್ಗೆ ಜನರಿಗೆ ಎಸ್.ಎಂ.ಎಸ್., ವಾಟ್ಸ್ ಅಪ್ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಆನೆಗಳು ಸಾಮಾನ್ಯವಾಗಿ ಆಹಾರ ಮತ್ತು ನೀರು ಅರಸಿ ನಾಡಿಗೆ ಬರುತ್ತಿವೆ. ಹೀಗಾಗಿ ಅರಣ್ಯದೊಳಗೆ ವನ್ಯ ಜೀವಿಗಳಿಗೆ ಅದರಲ್ಲೂ ಆನೆಗಳಿಗೆ ಅಗತ್ಯ ಆಹಾರ, ನೀರು ಸಿಗುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕ್ರಮ ವಹಿಸಲಾಗಿದೆ. ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾದಾಗ, ಅರಣ್ಯ ಪ್ರದೇಶದೊಳಗಿನ ನೀರುಗುಂಡಿ ಅಂದರೆ ವಾಟರ್ ಹೋಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಕೊಳವೆ ಬಾವಿಗಳಿಗೆ ಅಳವಡಿಸಲಾದ ಸೌರ ಪಂಪ್ ಗಳ ಮೂಲಕ ನಿರಂತರವಾಗಿ ನೀರು ಲಭ್ಯವಾಗುವಂತೆ ಮಾಡಲಾಯಿತು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ನಾಗರಹೊಳೆ, ಬಂಡೀಪುರ, ಬಿಆರ್.ಟಿ. ಮೊದಲಾದ ಕಡೆಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವ ಲಾಂಟನಾ, ಸನ್ನಾದಂತಹ ಕಳೆಯಿಂದಲೂ ಆನೆಗಳಿಗೆ ಹುಲ್ಲು, ತೊಗಟೆ, ಎಲೆ, ಸೊಪ್ಪು ಮತ್ತು ನೀರು ಸರ್ವ ಋತುವಿನಲ್ಲೂ ಲಭ್ಯವಾಗುವಂತೆ ಮಾಡಲು ಮತ್ತು ಲಾಂಟನಾ ಕಳೆ ನಿರ್ಮೂಲನೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದೂ ವಿವರ ನೀಡಿದರು.
ಅರಣ್ಯ ಸಮೃದ್ಧ ರಾಜ್ಯ ಕರ್ನಾಟಕ:
ರಾಜ್ಯದಲ್ಲಿ ಒಟ್ಟು 43,382.76 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶ ಇದ್ದು, ಈ ಪೈಕಿ 11,318.358 ಚದರ ಕಿಲೋ ಮೀಟರ್ ಸಂರಕ್ಷಿತ ಅರಣ್ಯ ಪ್ರದೇಶವಿದೆ. ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನಗಳು, 36 ವನ್ಯಜೀವಿ ಅಭಯಾರಣ್ಯಗಳು, 19 ಸಂರಕ್ಷಿತ ಮೀಸಲು ಹಾಗೂ 1 ಸಮುದಾಯ ಮೀಸಲು ಅರಣ್ಯವಿದೆ. 5 ಹುಲಿ ಸಂರಕ್ಷಿತ ತಾಣಗಳಿವೆ ಎಂದು ಮಾಹಿತಿ ನೀಡಿದರು.
1972ರಲ್ಲಿ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧೀ ಅವರು ವನ್ಯಜೀವಿ ಸಂರಕ್ಷಣಾ ಕಾಯಿದೆ ಮತ್ತು 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಪರಿಣಾಮವಾಗಿ ಇಂದು ದೇಶದಾದ್ಯಂತ ಸಾಕಷ್ಟು ಅರಣ್ಯ ಮತ್ತು ವನ್ಯಜೀವಿ ಉಳಿದಿದೆ ಎಂದರೆ ತಪ್ಪಾಗಲಾರದು ಎಂದರು.
ಜನಸಂಖ್ಯೆ ಹೆಚ್ಚಾದಂತೆಲ್ಲಾ, ನಗರ, ಪಟ್ಟಣ ವಿಸ್ತರಣೆ ಆದಂತೆಲ್ಲಾ.. ಕಾಡಿನ ಅಂಚಿನಲ್ಲೂ ಜನವಸತಿ ಪ್ರದೇಶಗಳು ತಲೆ ಎತ್ತಿವೆ. ಇದರ ಪರಿಣಾಮವಾಗಿ ಮಾನವ ಮತ್ತು ವನ್ಯ ಜೀವಿ ಸಂಘರ್ಷದ ಪ್ರಕರಣಗಳೂ ಹೆಚ್ಚಾಗುತ್ತಿವೆ.
ಮಾನವ ಮತ್ತು ವನ್ಯ ಜೀವಿ ಸಂಘರ್ಷ ಇಂದು ನಿನ್ನೆಯ ಸಮಸ್ಯೆ ಅಲ್ಲ. ಅನಾದಿಕಾಲದಿಂದಲೂ ಕಾಡಿನ ಪ್ರಾಣಿಗಳು ನಾಡಿಗೆ ಬಂದು ಉಪಟಳ ನೀಡುತ್ತಿದ್ದ ಬಗ್ಗೆ ರಾಮಾಯಣ, ಮಹಾಭಾರತದಲ್ಲೂ ಉಲ್ಲೇಖವಿದೆ. ಸತ್ಯ ಹರಿಶ್ಚಂದ್ರ ತಮಗೆ ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಪುರಜನರು ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಬೇಟೆಗೆ ಹೋದ ಎಂದು ನಾವು ಓದಿದ್ದೇವೆ. ಆದರೆ ಈಗ ಯಾವುದೇ ವನ್ಯ ಜೀವಿ ಭೇಟಿಗೆ ಅವಕಾಶವಿಲ್ಲ. ಹೀಗಾಗಿ ಅವುಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.
ಕಸ್ತೂರಿ ರಂಗನ್ ವರದಿ: ಚರ್ಚಿಸಿ ತೀರ್ಮಾನ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ರಾಜ್ಯದ 20,668 ಚದರ ಕಿಲೋ ಮೀಟರ್ ಗೂ ಹೆಚ್ಚು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿದೆ. ರಾಜ್ಯದ 10 ಜಿಲ್ಲೆಗಳ ಅಂದರೆ ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಯ 33 (ತಾಲ್ಲೂಕು ಪುನರ್ ವಿಂಗಡಣೆಯ ನಂತರ 39) ತಾಲ್ಲೂಕುಗಳ 1533 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಈಗಾಗಲೇ ಈ ವರದಿ ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಈಗ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಚಿವ ಸಂಪುಟದಲ್ಲಿ ಸಮಾಲೋಚಿಸಿ, ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಂಜಯ್ ಕುಮಾರ್ ಸಮಿತಿ: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತಂತೆ ಎಲ್ಲ ಬಾಧ್ಯಸ್ಥರೊಂದಿಗೆ ಅಂದರೆ 1533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳೊಂದಿಗೆ ಚರ್ಚಿಸಿ, ಸಾಧಕ ಬಾಧಕ ಅರಿತು ವರದಿ ನೀಡಲು ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿತ್ತು. ಆ ಸಮಿತಿ ಸದಸ್ಯರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದರು. ಆದರೆ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಜನರೊಂದಿಗೆ ಮಾತುಕತೆ ನಡೆಸಲಿಲ್ಲ ಎಂದು ಹೇಳಿದರು.
2015ರ ನಂತರದ ಒತ್ತುವರಿ ಮಾತ್ರ ತೆರವು: ಖಂಡ್ರೆ ಸ್ಪಷ್ಟನೆ
ರಾಜ್ಯ ಸರ್ಕಾರ 2015ರಲ್ಲಿ ಒಂದು ಆದೇಶ ಮಾಡಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರ್ಕಾರ ಈಗಲೂ ಅದಕ್ಕೆ ಬದ್ಧವಾಗಿದೆ. ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. ಆದರೆ 2015ರ ನಂತರದ ಹೊಸ ಒತ್ತುವರಿ ವಿಚಾರದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.