ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ 384 ಹುದ್ದೆಗಳಿಗೆ ಕೆಲಸದ ದಿನವಾದ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಅವಕಾಶವಾಗುವಂತೆ, ಪರೀಕ್ಷಾ ಕೇಂದ್ರಗಳಿರುವ ಕಡೆ ಮತ್ತು ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿರುವ ಸರ್ಕಾರಿ ಸೇವಾನಿರತರಿಗೆ ಅಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಡಿಪಿಎಆರ್ ಕಾರ್ಯದರ್ಶಿಗೆ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ರಾಕೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಆಗಸ್ಟ್ 25ರಂದು (ಭಾನುವಾರ) ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿತ್ತು. ಅದೇ ದಿನ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ಗುಮಾಸ್ತ ಹುದ್ದೆಗಳಿಗೆ ಪರೀಕ್ಷೆ ನಡಸಲಿದೆ. ಹೀಗಾಗಿ, ಆಗಸ್ಟ್ ತಿಂಗಳಲ್ಲೇ ಬೇರೊಂದು ದಿನ ಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಮುಖ್ಯಮಂತ್ರಿ ಸಲಹೆ ನೀಡಿದ್ದರು.
‘214 ಸರ್ಕಾರಿ, 189 ಅನುದಾನಿತ, 161 ಖಾಸಗಿ ಶಾಲಾ ಕಾಲೇಜು ಸೇರಿದಂತೆ ಒಟ್ಟು 564 ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡಿ ಇದೇ 25ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಂದು ಐಬಿಪಿಎಸ್ ಪರೀಕ್ಷೆ ಇರುವ ಬಗ್ಗೆ ಆಯೋಗದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಲ್ಲದೆ, ಆಯೋಗದೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ, ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಂಡಿರುವುದರಿಂದ ಅಲ್ಪಕಾಲಕ್ಕೆ ಪರೀಕ್ಷೆ ಮುಂದೂಡುವಂತೆ ಸಲಹೆ ನೀಡಿದ್ದರು. ಹೀಗಾಗಿ, ಇದೇ 27ರಂದು (ಮಂಗಳವಾರ) ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಪತ್ರದಲ್ಲಿ ರಾಕೇಶ್ ಕುಮಾರ್ ಉಲ್ಲೇಖಿಸಿದ್ದಾರೆ.