ಕೊಡವ ಸಮುದಾಯದವರಿಗೆ ಭೌಗೋಳಿಕ, ರಾಜಕೀಯ ಸ್ವಾಯತ್ತತೆಯ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲು ಆಯೋಗವೊಂದನ್ನು ರಚಿಸಲು ನಿರ್ದೇಶಿಸಬೇಕು ಎಂದು ಕೋರಲಾಗಿರುವ ಅರ್ಜಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಅಧ್ಯಕ್ಷ ಎನ್ ವಿ ನಾಚಪ್ಪ ಕೊಡವ ಮತ್ತು ಅರ್ಜಿದಾರರ ಪರ ವಕೀಲ ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರನ್ನು ಹೊರತುಪಡಿಸಿದಂತೆ ಉಳಿದೆಲ್ಲ ಮಧ್ಯಂತರ ಅರ್ಜಿದಾರರನ್ನು ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಸಿಎನ್ಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಸುಬ್ರಮಣಿಯನ್ ಸ್ವಾಮಿ ಅವರು “ಪ್ರಕರಣದಲ್ಲಿ ನಮ್ಮ ಕೋರಿಕೆ ಅತ್ಯಂತ ಸ್ಪಷ್ಟವಾಗಿದೆ. ಕೊಡವ ಸಮುದಾಯದವರಿಗೆ ಭೌಗೋಳಿಕ–ರಾಜಕೀಯ ಸ್ವಾಯತ್ತತೆಯ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲು ಆಯೋಗವೊಂದನ್ನು ರಚಿಸಲು ನಿರ್ದೇಶಿಸಿದರೆ ಅವರ ಸಾಂಸ್ಕೃತಿಕ ಹಕ್ಕುಗಳನ್ನೂ ಕಾಪಾಡಿದಂತಾಗುತ್ತದೆ” ಎಂದರು.
ಕೇಂದ್ರ ಸರ್ಕಾರದ ಪರ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು “ಕೊಡವರು ಬಂದೂಕು ಹೊಂದುವುದು ಅವರ ಸಾಂಸ್ಕೃತಿಕ ಹಕ್ಕು ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವೊಂದು ಬಾಕಿ ಇದ್ದು, ಅದು ಸೆಪ್ಟೆಂಬರ್ 17ಕ್ಕೆ ವಿಚಾರಣೆಗೆ ನಿಗದಿಯಾಗಿದೆ. ಆ ಪ್ರಕರಣವು, ಈ ಪ್ರಕರಣದ ಕೋರಿಕೆಯ ಜೊತೆಗೆ ಸಾಮ್ಯತೆ ಹೊಂದಿದೆ” ಎಂದು ಪೀಠಕ್ಕೆ ವಿವರಿಸಿದರು.
ಇದೇ ವೇಳೆ ಬೆಂಗಳೂರಿನ ಕೊಡವ ಸಮಾಜದ ಪರ ಹಾಜರಾಗಿದ್ದ ವಕೀಲ ಅಜಿತ್ ನಾಚಪ್ಪ ಅವರು “ಪ್ರಕರಣದಲ್ಲಿ ಮೂಲ ಅರ್ಜಿದಾರರನ್ನು ಬೆಂಬಲಿಸುವುದಾಗಿ ತಿಳಿಸಿ ನಮ್ಮನ್ನೂ ಮಧ್ಯಂತರ ಅರ್ಜಿದಾರರನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು. ಆದರೆ, ಇದನ್ನು ಒಪ್ಪದ ನ್ಯಾಯಾಲಯ ಎಲ್ಲ ಮಧ್ಯಂತರ ಅರ್ಜಿದಾರರನ್ನೂ ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡುವಂತೆ ಆದೇಶಿಸಿತು. ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು.
ಈ ಪ್ರಕರಣದಲ್ಲಿ ತಮ್ಮನ್ನೂ ಮಧ್ಯಂತರ ಅರ್ಜಿದಾರರನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ‘ಕೊಡವ ಬೊನಿಪಟ್ಟ ಸಮಾಜ’ವೂ ಸೇರಿದಂತೆ ಒಟ್ಟು ಹತ್ತು ಸಂಘಟನೆಗಳು ಮತ್ತೊಂದು ಮಧ್ಯಂತರ ಅರ್ಜಿ ಸಲ್ಲಿಸಿವೆ.