ಮನೆ ಅಪರಾಧ ಹೊತ್ತಿ ಉರಿದ ಟಿಕ್ಸೊ ಟೇಪ್ ಕಂಪನಿ: ಓರ್ವ ಕಾರ್ಮಿಕ ಕಾಣೆ, ಮೂವರಿಗೆ ಗಂಭೀರ ಗಾಯ

ಹೊತ್ತಿ ಉರಿದ ಟಿಕ್ಸೊ ಟೇಪ್ ಕಂಪನಿ: ಓರ್ವ ಕಾರ್ಮಿಕ ಕಾಣೆ, ಮೂವರಿಗೆ ಗಂಭೀರ ಗಾಯ

0

ಬೆಳಗಾವಿ: ನಾವಗೆ ಗ್ರಾಮದ ಹೊರ ವಲಯದಲ್ಲಿರುವ ಟಿಕ್ಸೊ ಟೇಪ್‌ (ಅಂಟು) ಸ್ನೇಹಂ ಕಾರ್ಖಾನೆಗೆ ತಡರಾತ್ರಿ ಬೆಂಕಿ ಬಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Join Our Whatsapp Group

ಸ್ನೇಹಂ ಹೆಸರಿನ ಕಾರ್ಖಾನೆ ಇದಾಗಿದ್ದು ಮೂರು ಶಿಫ್ಟ್‌ಗಳಲ್ಲಿ ತಲಾ 74 ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಸದ್ಯದ ಮಾಹಿತಿ ಪ್ರಕಾರ, ಕಾರ್ಮಿಕರಾದ ಬೆಳಗಾವಿ ತಾಲೂಕಿನ ಕವಲವಾಡಿಯ ಮಾರುತಿ ನಾರಾಯಣ ಕರವೇಕರ (32), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35), ರಾಝವಾಡಿಯ ರಂಜೀತ ದಶರಥ ಪಾಟೀಲ (39) ಗಾಯಗೊಂಡಿದ್ದು ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಮಾರ್ಕಂಡೇಯ ನಗರದ ಯಲ್ಲಪ್ಪ (20) ಎಂಬ ಕಾರ್ಮಿಕ ಕಾರ್ಖಾನೆ ಒಳಗೆ ಸಿಲುಕಿದ್ದಾರೆ ಎಂದು ಇತರ ಕಾರ್ಮಿಕರು‌ ಮಾಹಿತಿ‌ ನೀಡಿದ್ದಾರೆ.

ಅಗ್ನಿ ಅವಘಡ ಸಂಭವಿಸಿದ ನಾವಗೆ ಗ್ರಾಮಕ್ಕೆ‌ ಕೂಡಲೇ ಧಾವಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಡರಾತ್ರಿ 12.30ರವರೆಗೂ ಸ್ಥಳದಲ್ಲಿದ್ದರು.

ಇದೇ ವೇಳೆ, ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ನೇಹಂ ಕಾರ್ಖಾನೆಯ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ. ಒಳಗೆ ಎಷ್ಟು ಜನ ಸಿಲುಕಿದ್ದಾರೆ ಎಂದು ಗೊತ್ತಾಗಿಲ್ಲ. ಇದೊಂದು ದೊಡ್ಡ ಅವಘಡ. ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 200 ಬೆಡ್ ಸಿದ್ಧಗೊಳಿಸಲಾಗಿದೆ ಎಂದಿದ್ದಾರೆ.

ಆರು ಅಗ್ನಿಶಾಮಕ ವಾಹನಗಳ ಸಮೇತ ಹಲವು ಸಿಬ್ಬಂದಿ ಬೆಂಕಿ‌ ನಂದಿಸುವಲ್ಲಿ ನಿರತರಾಗಿದ್ದಾರೆ. ಕಾರ್ಖಾನೆಯ ಸುತ್ತ ಮನೆಗಳಿದ್ದು, ಜನರು ಆತಂಕ ಪಡಬೇಕಾಗಿಲ್ಲ. ಕಾರ್ಖಾನೆಯಲ್ಲಿನ ಗ್ಯಾಸ್ ಸಿಲಿಂಡರ್​ಗಳು ಸ್ಫೋಟಗೊಳ್ಳುವ ಸಾಧ್ಯತೆ ಇಲ್ಲ ಎಂದು ಪರಿಣತರು‌ ಖಚಿತಪಡಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ‌ ಗುಳೇದ ನೇತೃತ್ವದಲ್ಲಿ ಸಾಕಷ್ಟು ಪೊಲೀಸರನ್ನೂ ನಿಯೋಜಿಸಲಾಗಿದೆ. ಹೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಕಾರ್ಖಾನೆಯ ಲಿಫ್ಟ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಅಲ್ಲಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಕಾರ್ಖಾನೆ ತುಂಬಾ ವ್ಯಾಪಿಸಿದೆ. ಟಿಕ್ಸೊ ಟೇಪ್‌ ತಯಾರಿಸಲು ಬಳಸುತ್ತಿದ್ದ ಕೆಲ ಸಲಕರಣೆಗಳು ಬೆಂಕಿ ಹೆಚ್ಚಲು ಕಾರಣವಾಗಿದೆ. ಬೆಂಕಿ ಕಂಡು ಜೀವ ಉಳಿಸಿಕೊಳ್ಳಲು ಕಾರ್ಖಾನೆಯಿಂದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.