ಮನೆ ಕಾನೂನು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ರಾಜ್ಯ ಸರ್ಕಾರ ತನಿಖೆ ನಡೆಸದೆ ಮೌನವಹಿಸುವಂತೆ ಹೇಳಲಾಗದು- ಎಜಿ ವಾದ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ರಾಜ್ಯ ಸರ್ಕಾರ ತನಿಖೆ ನಡೆಸದೆ ಮೌನವಹಿಸುವಂತೆ ಹೇಳಲಾಗದು- ಎಜಿ ವಾದ

0

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ತನಿಖೆ ನಡೆಸದೆ ಮೌನವಹಿಸುವಂತೆ ಹೇಳಲಾಗದು. ಪೊಲೀಸ್‌ ತನಿಖೆ ರಾಜ್ಯದ ವಿಚಾರವಾಗಿದೆ. ಇಲ್ಲಿ ಸಾಂವಿಧಾನಿಕ ಪ್ರಶ್ನೆ ಅಡಗಿದ್ದು, ಅದಕ್ಕೆ ನ್ಯಾಯಾಲಯ ಉತ್ತರಿಸಬೇಕಿದೆ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ ಮುಂದೆ ವಾದ ಮಂಡಿಸಿದೆ.

Join Our Whatsapp Group

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ತನಿಖೆಗೆ ವರ್ಗಾಯಿಸುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರತಿನಿಧಿಸಿದ್ದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು “ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ವರ್ಗಾವಣೆ ಮಾಡುವುದಲ್ಲ, ಬದಲಿಗೆ ಸಿಬಿಐ ತನಿಖೆಗೆ ತಲೆಬಾಗಬೇಕು. ಎಸ್‌ಐಟಿ ತನಿಖೆ ನಡೆಸುವ ವ್ಯಾಪ್ತಿ ಹೊಂದಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಿಬಿಐಗೆ ಒಪ್ಪಿಗೆಯಾದರೆ ಎಸ್‌ಐಟಿ ತನಿಖೆಗೆ ಸಲಹೆ ನೀಡಬಹುದು” ಎಂದರು.

ಇದಕ್ಕೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಯೂನಿಯನ್‌ ಬ್ಯಾಂಕ್‌ ಏನು ಹೇಳಬೇಕು ಅದನ್ನು ಹೇಳಲಿ. ಅದಕ್ಕೆ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಅರ್ಜಿಗೆ ಏನೇನು ತಿದ್ದುಪಡಿ ಮಾಡಬೇಕು ಅದನ್ನು ಮಾಡಿ ಅವರು ಸಲ್ಲಿಸಬಹುದು” ಎಂದರು.

ಮುಂದುವರಿದು, “ಆರೋಪಿತ ದೂರುದಾರರು (ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ) ತಮಗೆ ಹೊಂದುವ ತನಿಖಾ ಸಂಸ್ಥೆ ಆಯ್ದುಕೊಳ್ಳಲಾಗದು. ಪೊಲೀಸ್‌ ತನಿಖೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬ್ಯಾಂಕ್‌ ಮತ್ತು ಆರ್‌ಬಿಐ ಏನು ಮಾಡಬೇಕು ಅದನ್ನು ಮಾಡಲಿ. ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸದೇ ಮೌನವಹಿಸುವಂತೆ ಹೇಳಲಾಗದು. ಇದು ಸಾಂವಿಧಾನಿಕ ಪ್ರಶ್ನೆಯಾಗಿದ್ದು, ಅದಕ್ಕೆ ನ್ಯಾಯಾಲಯ ಉತ್ತರಿಸಬೇಕಿದೆ. ಸದ್ಯಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪರವಾಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಅರ್ಜಿಯ ಪ್ರತಿ ಪಡೆದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಆಲಿಸಿದ ಪೀಠವು ಉಭಯ ಪಕ್ಷಕಾರರ ಸಮ್ಮತಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸೆಪ್ಟೆಂಬರ್‌ 4ಕ್ಕೆ ಮುಂದೂಡಿತು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳಾದ ನಿತೇಶ್‌ ರಂಜನ್‌, ಎ ಮಣಿಮೇಕಳೈ, ಎಸ್‌ ರಾಮಸುಬ್ರಮಣಿಯನ್‌, ಸಂಜಯ್‌ ರುದ್ರ ಮತ್ತು ಪಂಕಜ್‌ ದ್ವಿವೇದಿ ವಿರುದ್ಧದ ಆರೋಪಗಳನ್ನು ಕೈಬಿಟ್ಟು ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿಗಳು ಅನೂರ್ಜಿತವಾಗಿವೆ ಎಂದು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ದಾಖಲಿಸಿದ ಪೀಠವು ಅರ್ಜಿಗಳನ್ನು ಇತ್ಯರ್ಥಪಡಿಸಿತು.