ಬೆಂಗಳೂರು: ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಗುರುವಾರ(ಆ.8ರಂದು) ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಆಂಧ್ರ ಪ್ರದೇಶದ ಡಿಸಿಎಂ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಆಂಧ್ರದ ಪರಿಸರ ಮತ್ತು ಅರಣ್ಯ ಖಾತೆ ಸಚಿವರೂ ಆಗಿರುವ ಪವನ್ ಕಲ್ಯಾಣ್ ಅವರು, ಅರಣ್ಯ ಇಲಾಖೆ ಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದಾರೆ.
ರಾಜ್ಯದ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಆನೆ ಹಾವಳಿ ತಡೆಗಟ್ಟುವ ಸಂಬಂಧ ನಡೆಯಲಿರುವ ಸಭೆಯಲ್ಲಿ ಅವರು ಭಾಗಿಯಾಗಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಆಗಿದ್ದಾರೆ.
ಈ ವೇಳೆ ಸಿಎಂ ಜೊತೆ ಸಚಿವ ಜಮೀರ್ ಅಹಮದ್ ಹಾಗೂ ಇತರರು ಉಪಸ್ಥಿತರಿದ್ದರು.
ವಿಧಾನಸಭೆಗೆ ಬರುತ್ತಿದ್ದಂತೆ ಅವರೊಂದಿಗೆ ಫೋಟೋ ಕ್ಲಿಕ್ಕಿಸಲು ಸಿಬ್ಬಂದಿಗಳು , ಸರ್ಕಾರಿ ನೌಕರರು ಮುಗಿಬಿದ್ದ ದೃಶ್ಯ ಕಂಡುಬಂತು.
ಆಗಸ್ಟ್ 12 ರಂದು ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದಾರೆ. ಇದರಲ್ಲಿ ಆನೆ ಹಾವಳಿ ತಪ್ಪಿಸಲು ಇರುವ ಪರಿಹಾರ ಮಾರ್ಗದ ಬಗ್ಗೆ ಚರ್ಚೆ ನಡೆಯಲಿದೆ.