ಮನೆ ರಾಜ್ಯ ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯವನ್ನು ದೇಶದಲ್ಲೇ ನಂ.1 ಮಾಡುವ ಗುರಿ ನಮ್ಮದು: ಜಾರ್ಜ್‌

ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯವನ್ನು ದೇಶದಲ್ಲೇ ನಂ.1 ಮಾಡುವ ಗುರಿ ನಮ್ಮದು: ಜಾರ್ಜ್‌

0

ಚಿಕ್ಕಬಳ್ಳಾಪುರ: ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂ. 1 ಮಾಡುವ ಗುರಿ ನಮ್ಮ ಸರ್ಕಾರದ್ದು. ಈ ನಿಟ್ಟಿನಲ್ಲಿ ಜಲ ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರದ ಕ್ರಮಗಳಿಂದಾಗಿ ಪ್ರಸ್ತುತ ರಾಜ್ಯಕ್ಕೆ ಬೇಕಾದ ವಿದ್ಯುತ್ ಉತ್ಪಾದಿಸುವುದರ ಜತೆಗೆ ವಿದ್ಯುತ್ತನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡುವ ಹಂತಕ್ಕೆ ತಲುಪಿದ್ದೇವೆ,”ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳದ್ದಾರೆ.

Join Our Whatsapp Group

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಸಚಿವರು, “ವಿದ್ಯುತ್ ಉತ್ಪಾದನೆ ಒತ್ತು ನೀಡಿ, ಹೊರ ರಾಜ್ಯಗಳಿಗೆ ಮಾರಾಟ ಮಾಡುವ ಹಂತಕ್ಕೆ ತಲುಪಲು ಕಾರಣರಾದ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಏಪ್ರಿಲ್‌ನಿಂದ ರಾಜ್ಯದಲ್ಲಿ 1,403 ಕೋಟಿ ರೂ. ಮೌಲ್ಯದ ವಿದ್ಯುತ್‌ ಮಾರಾಟವಾಗಿದೆ,”ಎಂದಿದ್ದಾರೆ.

“ವಿದ್ಯುತ್‌ ಉತ್ಪಾದನೆ ಜತೆಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಭೂಮಿ ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಸಕರ ನೆರವು ಪಡೆದು ಅದನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಭೂಮಿಯ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು,” ಎಂದು ಜಾರ್ಜ್ ಹೇಳಿದ್ದಾರೆ.

“ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇನ್ನೂ ಇರುವ ಕಬ್ಬಿಣ ಮತ್ತು ಮರದ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾಯಿಸಿ ಸಿಮೆಂಟ್ ಕಂಬಗಳನ್ನು ಅಳವಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿದೆ. ಜತೆಗೆ, ವಿದ್ಯುತ್ ತಂತಿ, ಕಂಬಗಳು ಸೇರಿದಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಸಚಿವರು ಸೂಚಿಸಿದರು.

ಪ್ರತಿ ಜಿಲ್ಲೆಯಲ್ಲೂ ಪ್ರಗತಿ ಪರಿಶೀಲನೆ
ಪ್ರತಿ ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವ ಮೂಲಕ ಇಂಧನ ಇಲಾಖೆಗೆ ಹೊಸ ಕಾಯಕಲ್ಪ ನೀಡಲಾಗುವುದು. ಒಂದು ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಮುಂದಿನ ಸಭೆಯೊಳಗೆ ಬಗೆಹರಿಸಬೇಕು. ಒಂದೇ ಸಮಸ್ಯೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು,” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು, ಈ ವಿಚಾರದಲ್ಲಿ ಸ್ಥಳೀಯ ಶಾಸಕರ ಸಲಹೆ ಪಡೆದು ಕೆಲಸ ಮಾಡಬೇಕು ಎಂದು ತಿಳಿಸಿದರು.

  • ಸೋಲಾರ್ ಪಂಪ್ ಸೆಟ್‌ಗೆ ಆದ್ಯತೆ
    “ವಿದ್ಯುತ್ ಸಮಸ್ಯೆ ಬಗೆಹರಿಸುವುದರೊಂದಿಗೆ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೌರ ಪಂಪ್ ಸೆಟ್ ಅಳವಡಿಸಲು ಕೇಂದ್ರ ಸರ್ಕಾರಿ ಪುರಸ್ಕೃತ ಕುಸುಮ್ ಬಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಮೊತ್ತವನ್ನು ಶೇ. 50ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಶೇ. 30ರಷ್ಟು ಸಬ್ಸಿಡಿ ನೀಡುತ್ತಿದ್ದು, ಉಳಿದ ಶೇ. 20ರಷ್ಟು ಮೊತ್ತವನ್ನು ರೈತರು ಭರಿಸಿದರೆ ಸಾಕು. ಅವರಿಗೆ ಸೋಲಾರ್ ಪಂಪ್ ಸೆಟ್ ಒದಗಿಸಲಾಗುತ್ತದೆ,” ಎಂದು ಹೇಳಿದರು.

“ಅದೇ ರೀತಿ ಕುಸುಮ್ ಸಿ ಯೋಜನೆಯಡಿ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ ಅದನ್ನು ನೇರವಾಗಿ ಸಬ್ ಸ್ಟೇಷನ್ ಗಳ ಮೂಲಕ ರೈತರಿಗೆ ಒದಗಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ,” ಎಂದರು.

“ಚಿಕ್ಕಬಳ್ಳಾಪುರ, ಕೋಲಾರದಂತಹ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಒಂದು ಸಾವಿರ ಅಡಿ ಆಳಕ್ಕಿಂತ ಕೆಳಗೆ ಹೋಗಿದೆ. ಇಂತಹ ಕಡೆಗಳಲ್ಲಿ ಆಳದಿಂದ ನೀರು ಮೇಲಕ್ಕೆತ್ತಲು ಸಾಧ್ಯವಾಗುವಂತೆ ಸೋಲಾರ್ ಪಂಪ್ ಸೆಟ್ ಗಳನ್ನು ಅಭಿವೃದ್ಧಿಪಡಿಸಲಾಗುವುದು,” ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್,ಪುಟ್ಟಸ್ವಾಮಿಗೌಡ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕು‌ಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಚಿಕ್ಕಬಳ್ಳಾಪರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ಜಿಟ್ಟಾಲಿ, ಎಸ್ಪಿ ಕುಶಾಲ್ ಚೋಕ್ಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.