ಮನೆ ಕಾನೂನು ಜಿಲ್ಲಾ ನ್ಯಾಯಾಧೀಶರಿಗೆ ಅಲ್ಪ ಪಿಂಚಣಿ: ಸಮಸ್ಯೆ ಪರಿಶೀಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಜಿಲ್ಲಾ ನ್ಯಾಯಾಧೀಶರಿಗೆ ಅಲ್ಪ ಪಿಂಚಣಿ: ಸಮಸ್ಯೆ ಪರಿಶೀಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

0

ಭಾರತದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಪಾವತಿಸುವ ಪಿಂಚಣಿ ದರಗಳು ಅತ್ಯಲ್ಪವಾಗಿವೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮತ್ತೆ ಕಳವಳ ವ್ಯಕ್ತಪಡಿಸಿದೆ. ಜಿಲ್ಲಾ ನ್ಯಾಯಾಧೀಶರನ್ನು ಹೈಕೋರ್ಟ್‌ಗೆ ಪದೋನ್ನತಿ ನೀಡಿದರೂ ಕೂಡ ಸಮಸ್ಯೆ ಬಗೆಹರಿಯುವುದಿಲ್ಲ‌ ಎಂದು ಅದು ಬೆರಳು ಮಾಡಿದೆ.

Join Our Whatsapp Group

ಅಖಿಲ ಭಾರತ ನ್ಯಾಯಾಧೀಶರ ಸಂಘ 2015ರಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ಜಿಲ್ಲಾ ನ್ಯಾಯಾಧೀಶರು ತಮಗೆ 55-60 ವರ್ಷ ವಯಸ್ಸಾದಾಗ ಮಾತ್ರ ಹೈಕೋರ್ಟ್ ನ್ಯಾಯಮೂರ್ತಿಗಳಾಗುತ್ತಾರೆ. ತಮ್ಮ ಇಡೀ ಜೀವನವನ್ನು ಜಿಲ್ಲಾ ನ್ಯಾಯಾಧೀಶರು ನ್ಯಾಯಾಂಗಕ್ಕಾಗಿ ಮೀಸಲಿಟ್ಟರೂ ಸಹ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ದೊರೆಯುವ ದರದ ರೀತಿಯಲ್ಲಿಯೇ ಜಿಲ್ಲಾ ನ್ಯಾಯಾಧೀಶರ ಪಿಂಚಣಿಯನ್ನು ಲೆಕ್ಕ ಹಾಕಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ವಿಷಾದಿಸಿತು.

ಕೆಲವು ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ತಿಂಗಳಿಗೆ ಸುಮಾರು ₹ 8,000 ಪಿಂಚಣಿ ದರ ನೀಡಲಾಗುತ್ತಿದೆ. ಈ ಮೊತ್ತ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಅಂತಹ ನ್ಯಾಯಾಧೀಶರು ನಿವೃತ್ತಿಯ ನಂತರ ಬೇರೆ ಕೆಲಸ ಮಾಡುವುದೂ ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ಆದ್ದರಿಂದ, ಪಿಂಚಣಿ ಪಾವತಿಯಂತಹ ನಿವೃತ್ತಿ ಸವಲತ್ತುಗಳ ವಿಷಯಕ್ಕೆ ಬಂದಾಗ ನ್ಯಾಯಾಧೀಶರ ವಿಷಯದಲ್ಲಿ ವಿನಾಯಿತಿ ತೋರಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಹೇಳಿತು. 

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಈ ವಿಚಾರವನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು. ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಎಸ್ ಜಿ ಮೆಹ್ತಾ ಅವರು ಪ್ರಕರಣ ಮುಂದೂಡುವಂತೆ ಕೋರಿ ದ ಹಿನ್ನೆಲೆಯಲ್ಲಿ ಆಗಸ್ಟ್ 27 ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.  ಹಿಂದಿನ ವಿಚಾರಣೆಗಳಲ್ಲಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಸಾಕಷ್ಟು ಪಿಂಚಣಿ ನೀಡುತ್ತಿಲ್ಲ ಎಂದು ನ್ಯಾಯಾಲಯ ಹೇಳಿತ್ತು.