ಮೈಸೂರು:ಮಾಧ್ಯಮಗಳು ನನ್ನನ್ನು ಬಂಡೆ ಎಂದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ.ಈ ಬಂಡೆ ಸಿದ್ದರಾಮಯ್ಯ ಅವರ ಜತೆ ಇದೆ.ಈ ಬಂಡೆ ಜತೆ 135 ಶಾಸಕರೂ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಜತೆಗಿದ್ದಾರೆ. ಹೀಗಾಗಿ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೇಂದ್ರ ಸರಕಾರದ ದ್ವೇಷ ರಾಜಕಾರಣ, ಚುನಾಯಿತ ಸರಕಾರಗಳನ್ನು ಉರುಳಿಸುವ ಬಿಜೆಪಿ – ಜೆಡಿಎಸ್‌ನ ಜನತಂತ್ರ ವಿರೋಧಿ ಪಾದಯಾತ್ರೆಯನ್ನು ವಿರೋಧಿಸಿ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಕೆಪಿಸಿಸಿ ಆಯೋಜಿಸಿರುವ ಬೃಹತ್ ಜನಾಂದೋಲನ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
“ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನೀವು ಆಪರೇಶನ್ ಕಮಲದ ಮೂಲಕ ಈ ಹಿಂದೆ ಅನೇಕ ಸರಕಾರ ತೆಗೆದಿದ್ದೀರಿ. ಮಿಸ್ಟರ್ ಕುಮಾರಸ್ವಾಮಿ, ನಿನ್ನ ಮುಂದಾಳತ್ವದಲ್ಲಿ ಕೇವಲ 19 ಸೀಟುಗಳನ್ನು ಮಾತ್ರ ಗೆದ್ದಿದ್ದೀರಿ. ಈ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದರೂ ಈ ಕಾಂಗ್ರೆಸ್ ಅಳಿಸಲು ಆಗಲಿಲ್ಲ. ಬಡವರ ಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವನ್ನು ನೀನು ಎರಡು ಜನ್ಮ ಎತ್ತಿ ಬಂದರೂ ಅಳಿಸಲು ಸಾಧ್ಯವಿಲ್ಲ. ನೀನು ಏನೇ ಕುತಂತ್ರ ಮಾಡಿದರೂ ಕಾಂಗ್ರೆಸ್ ಅಳಿಸಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.
10 ತಿಂಗಳಲ್ಲ, 10 ವರ್ಷ ನಮ್ಮ ಸರಕಾರ ಮುಟ್ಟಲು ಆಗುವುದಿಲ್ಲ:
2023ರಲ್ಲಿ ರಾಜ್ಯದ ಜನರು ನಮಗೆ ಶೇ.43 ರಷ್ಟು ಮತ ನೀಡಿದ್ದಾರೆ, ಲೋಕಸಭೆಯಲ್ಲಿ ಶೇ.45 ರಷ್ಟು ಮತ ನೀಡಿದ್ದಾರೆ. 1 ಸೀಟು ಹೊಂದಿದ್ದ ನಾವು 9 ಸೀಟು ಗೆದ್ದಿದ್ದೇವೆ. ಜನರ ತೀರ್ಪನ್ನು ನಾವು ಒಪ್ಪುತ್ತೇವೆ. ಈ ಸರಕಾರವನ್ನು ಮುಂದಿನ 10 ತಿಂಗಳಲ್ಲಿ ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರಕಾರವನ್ನು ಮುಟ್ಟಲು ಸಾಧ್ಯವಿಲ್ಲ. ಮುಡಾ ಹಗರಣ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸಿಎಂ ರಾಜೀನಾಮೆ ಕೇಳುತ್ತಿರುವುದು ಅನೈತಿಕವಾದುದು ಎಂದು ಆಕ್ರೋಶ ಹೊರಹಾಕಿದರು.