ಮನೆ ಮನರಂಜನೆ “ಜೀನಿಯಸ್‌ ಮುತ್ತ’ ಸಿನಿಮಾ ವಿಮರ್ಶೆ

“ಜೀನಿಯಸ್‌ ಮುತ್ತ’ ಸಿನಿಮಾ ವಿಮರ್ಶೆ

0

ಕಷ್ಟ ಯಾರಿಗಿಲ್ಲ ಹೇಳಿ? ಅದನ್ನು ಎದುರಿಸಲು ಹಿಂಜರಿಯದ ಛಲ ಇರಬೇಕು. ಮುಖ್ಯವಾಗಿ ಜಾಣ್ಮೆ ತೋರಬೇಕು. ಅದು ಹೇಗೆ ಎಂಬುದನ್ನು “ಜೀನಿಯಸ್‌ ಮುತ್ತ’ನಿಂದ ನೋಡಿ ಕಲಿಯಬಹುದು. ಸಣ್ಣ ವಯಸ್ಸಿನಲ್ಲೇ ದೊಡ್ಡತನದ ಪ್ರಬುದ್ಧತೆ ತೋರಿಸುವ ಪೋರನೊಬ್ಬನ್ನ ಪಯಣವಿದು.

Join Our Whatsapp Group

ಬಾಲ್ಯದಿಂದಲೇ ಆಸ್ಪತ್ರೆ, ರೋಗಿಗಳು ..ಇದೇ ವಾತಾವರಣದಲ್ಲಿ ಬೆಳೆದ ಮುತ್ತನಿಗೆ, ವೈದ್ಯಕೀಯದಲ್ಲಿ ಅಪಾರ ಆಸಕ್ತಿ. ಹೀಗೆ ಸಾಗುವ ಕಥೆಯಲ್ಲಿ ಇದಕ್ಕಿದ್ದಂತೆ ಮುತ್ತನ ತಾಯಿ ವಿರಳ ಕಾಯಿಲೆಗೆ ತುತ್ತಾಗುತ್ತಾಳೆ. ಹೆಚ್ಚಿನ ಚಿಕಿತ್ಸೆಗೆಂದು ತಾಯಿಯನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆತರುವ ಮುತ್ತನಿಗೆ ಎದುರಾಗುವ ಕಷ್ಟ ಹಲವಾರು. ಅರಿಯದ ಊರಲ್ಲಿ ತನ್ನ ತಾಯಿಗೆ ಚಿಕಿತ್ಸೆ ಕೊಡಿಸುತ್ತಾನೋ ಇಲ್ಲವೋ ಎಂಬುದೆ ಚಿತ್ರದ ಕಥಾವಸ್ತು.

ಜೀನಿಯಸ್‌ ಹೆಸರಿಗೆ ತಕ್ಕಂತೆ, ಎದುರಾಗುವ ಪ್ರತಿ ಕಷ್ಟದ ಸನ್ನಿವೇಶಗಳನ್ನು ಜಾಣ್ಮೆಯಿಂದ ಎದುರಿಸುವ ಮುತ್ತ ಎಲ್ಲರಿಗೂ ಆಪ್ತವಾಗುತ್ತಾನೆ. ಇಲ್ಲಿ ಮುತ್ತನ ಪಾತ್ರದ ಮುಗ್ಧತೆ, ಜಾಣ್ಮೆ, ಆತ ತೋರುವ ಆತ್ಮೀಯ ಭಾವ, ಲವಲವಿಕೆಯ ವಾತಾವರಣ ಇವೇ ಚಿತ್ರದ ಹೈಲೈಟ್ಸ್‌. ಮಕ್ಕಳಿಗೊಂದು ಪ್ರೇರಣೆಯಿರಲಿ ಎಂಬಂತೆ ಈ ಸಿನಿಮಾ ಮೂಡಿಬಂದಿದೆ. ನಾಗಿಣಿ ಭರಣ ಅವರು ಕಥೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ಈ ಮೂಲಕ ಚೊಚ್ಚಲ ನಿರ್ದೇಶನದಲ್ಲೇ ಹೊಸದನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಬಾಲನಟನಾಗಿ ಸಿನಿರಂಗಕ್ಕೆ ಕಾಲಿಟ್ಟಿರುವ ಮಾಸ್ಟರ್‌ ಶ್ರೇಯಸ್‌ ಜೈಪ್ರಕಾಶ್‌ ಭರವಸೆ ಮೂಡಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯ್‌ ರಾಘವೇಂದ್ರ ಗಮನ ಸೆಳೆಯುತ್ತಾರೆ. ಮುತ್ತನ ಜಾಣ್ಮೆಯ ಸನ್ನಿವೇಶಗಳು ಇಷ್ಟವಾಗುತ್ತವೆ. ಚಿತ್ರದ ಛಾಯಾಗ್ರಹಣ ಉತ್ತಮವಾಗಿದೆ. ಟಿ.ಎಸ್‌. ನಾಗಾಭರಣ, ಪದ್ಮಾ ವಾಸಂತಿ, ಸುಂದರ್‌ರಾಜ್‌, ಪ್ರಿಯಾ ಅವಿನಾಶ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.