ವಿದ್ಯುತ್ ಬಿಲ್ ಪಾವತಿ ಸೇರಿ ವಿವಿಧ ಶುಲ್ಕಗಳ ಪಾವತಿಗೆ ಸ್ಕ್ಯಾನರ್ ಬಳಕೆಯ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ ಸ್ಕ್ಯಾನರ್) ಜಾರಿ ಮಾಡದ ಕುರಿತು ಆಗಸ್ಟ್ 23ರ ವೇಳೆಗೆ ಸೂಕ್ತ ಅಫಿಡವಿಟ್ ಸಲ್ಲಿಸದಿದ್ದಲ್ಲಿ ಮುಂದಿನ ವಿಚಾರಣೆ ವೇಳೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರು ಖುದ್ದು ಹಾಜರಿರಬೇಕು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ವಾಣಿಜ್ಯ ಸ್ಥಾವರಕ್ಕೆ ಹೆಚ್ಚುವರಿ ವಿದ್ಯುತ್ ಬೇಡಿಕೆಗೆ ಸಂಬಂಧಿಸಿದ ಭದ್ರತಾ ಠೇವಣಿ ಹಣವನ್ನು ಕೌಂಟರ್‌ನಲ್ಲಿ ಯುಪಿಐ ಸ್ಕ್ಯಾನರ್ ಮೂಲಕ ಪಾವತಿಸಲು ಅನುಮತಿಸಬೇಕು ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್ 47(5) ಜಾರಿ ಕೋರಿ ಬೆಂಗಳೂರಿನ ಹೊಸಕೋಟೆಯ ಸೀತಾಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ್‌ಗೌಡ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು, ಯುಪಿಐ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಇದು ಕೊನೆ ಅವಕಾಶ ಆಗಸ್ಟ್ 23ರ ವೇಳೆಗೆ ಅಫಿಡವಿಟ್ ಸಲ್ಲಿಸದಿದ್ದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದು ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.