ಮೈಸೂರು: ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್. ಎಲ್.ಎಚ್. ಪಿ.) ಗ್ರಾಮ ಪಂಚಾಯಿತಿ ಮಾರ್ಬಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಾರ್ಬಳ್ಳಿ ಇವರ ಸಹಯೋಗದಲ್ಲಿ ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಮಾರ್ಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಕಾರ್ಯದರ್ಶಿಗಳು ಪ್ರೊ.ಜೋಸ್ ವಿ.ಕೆ, ಮೈಸೂರು ಇತ್ತೀಚಿನ ದಿನಗಳಲ್ಲಿ ಪರಿಸರ ಹಾನಿಯು ತುಂಬಾ ಉಂಟಾಗುತ್ತಿದೆ. ನೀರಿನ ಶುದ್ಧತೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸುಸ್ಥಿರ ಪರಿಸರ ನಿರ್ಮಿಸೋಣ ಮತ್ತು ಪ್ರಸ್ತುತ ದಿನಮಾನಗಳಲ್ಲಿ ಮಾನವನ ಅತಿಯಾದ ಆಸೆಯಿಂದ ಪರಿಸರ ನಾಶವಾಗುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಹವಾಮಾನದ ವೈಪರಿತ್ಯ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಇಂದಿನಿಂದಲೇ ಪರಿಸರ ಸಂರಕ್ಷಣೆಯಲ್ಲಿ ಜಾಗೃತಗೊಳ್ಳದಿದ್ದರೆ, ಮುಂದಿನ ಪೀಳಿಗೆಯನ್ನು ನಾವೇ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ತಮ್ಮ ಹುಟ್ಟು ಹಬ್ಬದಂದು ನೆಟ್ಟಲ್ಲಿ ಮುಂದಿನ ಪೀಳಿಗೆಗೆ ಹಸಿರು ವಾತಾವರಣವನ್ನು ಕಲ್ಪಿಸಿದಂತಾಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ಪರಿಸರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಅದನ್ನು ಸುಧಾರಿಸುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ. ನಾವು ಇಂದು ನಿಮ್ಮ ಶಾಲೆಗೆ ನಿಮ್ಮೊಂದಿಗೆ 50 ಗಿಡಗಳನ್ನು ಸೇರಿಸುತ್ತಿದ್ದೇವೆ ಅವುಗಳನ್ನು ಸಲಹಿ, ಪೋಷಿಸಿ, ಬೆಳೆಸುವ ಜವಾಬ್ದಾರಿಯನ್ನು ತಮಗೆ ನೀಡುತ್ತಿದ್ದೇವೆ. ಯಾವುದೇ ಗಿಡಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ನಮ್ಮ ನಿಮ್ಮ ಎಲ್ಲರ ಹೊಣೆ ಎಂದು ತಿಳಿಸಿದರು.
ವಿಪ್ರೋ ಲಿಮಿಟೆಡ್ ನಿಂದ ಆಗಮಿಸಿದಂತಹ ಸ್ವಯಂಸೇವಕರು ಮತ್ತು ಕಾರ್ಯಕ್ರಮದಲ್ಲಿ ನೆರದಿದ್ದವರೆಲ್ಲರು ಸೇರಿ ಶಾಲಾ ಆವರಣದಲ್ಲಿ 50 ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಳಾ ಸಿ.ಆರ್. ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಮಾರ್ಬಳ್ಳಿ ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಪ್ರೊ ಲಿಮಿಟೆಡ್ ಶರ್ಲಿ ಎಚ್.ಆರ್., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಯತೀಶ್, ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷೆ ಮಮತಾ, ಮರಿಸ್ವಾಮಿ, ಮಾರ್ಬಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದರು.