ಮನೆ ಕಾನೂನು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

0

ಸುಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಾಲಯವು ಮೈಸೂರು ರಾಜವಂಶಸ್ಥರ ಖಾಸಗಿ ಸ್ವತ್ತಾಗಿರುವುದರಿಂದ ರಾಜ್ಯ ಸರ್ಕಾರವು ದೇವಾಲಯದ ನಿರ್ವಹಣೆಗಾಗಿ ರೂಪಿಸಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 2024 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿರುವ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ಕಾಯಿದೆಯನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸದಂತೆ ಮಧ್ಯಂತರ ಆದೇಶ ಮಾಡಿದೆ.

Join Our Whatsapp Group

ದಿವಂಗತ ಶ್ರೀಕಂಠ ದತ್ತ ಒಡೆಯರ್‌ ಪತ್ನಿ ಪ್ರಮೋದಾ ದೇವಿ ಒಡೆಯರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿದೆ. ರಾಜ್ಯ ಸರ್ಕಾರ, ಮೈಸೂರು ಜಿಲ್ಲಾಧಿಕಾರಿ ಮತ್ತು ಅರಮನೆ ಮುಜರಾಯಿ ಸಂಸ್ಥೆಯ ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಪ್ರಮೋದಾ ದೇವಿ ಅವರ ಪರವಾಗಿ ವಕೀಲೆ ಮಾನಸಿ ಕುಮಾರ್‌ ವಕಾಲತ್ತು ಹಾಕಿದ್ದಾರೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ಸೆಕ್ಷನ್‌ಗಳಾದ 2(ಎ), 3, 6, 12(1), 14(3), 14(4), 16(1), 17(1), 18, 19, 20(1)(0), 20(2), 25, 25 (4), 35 (2) ಮತ್ತು 40 ಸಂವಿಧಾನದ 14, 19, 21, 25 ಮತ್ತು 26ರ ಅಡಿ ಅರ್ಜಿದಾರರ ಹಕ್ಕಿನ ಉಲ್ಲಂಘನೆಯಾಗಿರುವುದರಿಂದ ಅದನ್ನು ರದ್ದುಪಡಿಸಬೇಕು. ಕಾಯಿದೆಯ ನಿಬಂಧನೆಗಳು ಸ್ವೇಚ್ಛೆ ಮತ್ತು ಕಾನೂನುಬಾಗಿರವಾಗಿದೆ ಎಂದು ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ.

ಶ್ರೀ ಚಾಮುಂಡೇಶ್ವರಿ ದೇವಿಯು ಮೈಸೂರಿನ ರಾಜವಂಶಸ್ಥರ ಮನೆ ದೇವರಾಗಿದ್ದು, ಮೈಸೂರಿನ ಮಹಾರಾಜರು ದೇವಾಲಯದ ಪೋಷಕರಾಗಿದ್ದರು. ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡಿ ದೇವಾಲಯ ಮತ್ತು ಮಹಾಬಲೇಶ್ವರ, ನಾರಾಯಣಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ಮತ್ತು ನಂದಿ ದೇವಾಲಯಗಳು ಹಿಂದಿನ ರಾಜವಂಶಸ್ಥರ ಖಾಸಗಿ ಸ್ವತ್ತಾಗಿವೆ. ದೇವಾಲಯಗಳು ಮತ್ತು ಅವುಗಳು ಆಸ್ತಿಯನ್ನು ಅಕ್ರಮವಾಗಿ ರಾಜ್ಯ ಸರ್ಕಾರ ವಶಕ್ಕೆ ಪಡೆಯುವುದಕ್ಕೆ ರಾಜವಂಸ್ಥರು ಆಕ್ಷೇಪಿಸಿದ್ದು, ಚಾಮುಂಡಿ ಬೆಟ್ಟದ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣವು ಹೈಕೋರ್ಟ್‌ ನ ವಿಭಾಗೀಯ ಪೀಠದಲ್ಲಿ ಮೇಲ್ಮನವಿಯ ರೂಪದಲ್ಲಿ ವಿಚಾರಣೆಗೆ ಬಾಕಿ ಇರುವಾಗ ರಾಜ್ಯ ಸರ್ಕಾರವು ಕಾಯಿದೆ ರೂಪಿಸಿರುವುದು ಕಾನೂನುಬಾಹಿರ. ಶಾಸಕಾಂಗದ ಸಮರ್ಥತೆ ಮೀರಿ ಕಾಯಿದೆ ರೂಪಿಸಲಾಗಿದ್ದು, ಕಾಯಿದೆಯ ನಿಬಂಧನೆಗಳು ಅಸಾಂವಿಧಾನಿಕವಾಗಿವೆ. ಆಕ್ಷೇಪಾರ್ಹ ಕಾಯಿದೆಯು ಅರ್ಜಿದಾರೆ ಪ್ರಮೋದಾ ದೇವಿ ಒಡೆಯರ್‌ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿರುವುದರಿಂದ ಅದನ್ನು ರದ್ದುಪಡಿಸಬೇಕು ಎಂದು ಕೋರಲಾಗಿದೆ.

ಆಕ್ಷೇಪಾರ್ಹವಾದ ಕಾಯಿದೆಯ ಮೂಲಕ ರಾಜ್ಯ ಸರ್ಕಾರವು ಶ್ರೀ ಚಾಮುಂಡಿಗೆ ಸಲ್ಲಿಕೆಯಾಗುವ ದೇಣಿಗೆ ಮತ್ತು ಇತರೆ ನಿಧಿಯ ಮೇಲೆ ಸಂಪೂರ್ಣ ಅಧಿಕಾರ ಹೊಂದಲಿದೆ. ಬಹುಮುಖ್ಯವಾಗಿ ದೇವಾಲಯವು ಅರ್ಜಿದಾರರ ಖಾಸಗಿ ಆಸ್ತಿ ಎಂಬುದನ್ನು ಕಡೆಗಣಿಸಿ ದೇವಳದ ಚರ ಮತ್ತು ಸ್ಥಿರಾಸ್ತಿಯನ್ನು ತನ್ನ ವಶಕ್ಕೆ ಪಡೆಯಲು ಕಾಯಿದೆ ಅವಕಾಶ ಕಲ್ಪಿಸಲಿದೆ. ಅನಿರ್ದಿಷ್ಟಾವಧಿಗೆ ದೇವಾಲಯ/ಖಾಸಗಿ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಲು ಯಾವುದೇ ಪ್ರಾಧಿಕಾರ ರಚಿಸುವಂತಿಲ್ಲ ಎಂಬುದನ್ನು ಮರೆತು ಕಾಯಿದೆ ಜಾರಿಗೊಳಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಶ್ರೀ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಇತರೆ ದೇವಾಲಯಗಳನ್ನು ಅಭಿವೃದ್ಧಿಪಡಿಸಲಾಗುವುದು ಹಾಗೂ ನಿರ್ವಹಿಸಲಾಗುವುದು ಎಂದು ಹೇಳಿಕೊಂಡು ಸರ್ಕಾರವು ಆಕ್ಷೇಪಾರ್ಹವಾದ ಕಾಯಿದೆ ಮೂಲಕ ದೇವಾಲಯಗಳನ್ನು ಅಂತಾರಾಷ್ಟ್ರೀಯ ಯಾತ್ರೆ, ಸಾಂಸ್ಕೃತಿಕ ಪ್ರವಾಸ ಕೇಂದ್ರವನ್ನಾಗಿಸುತ್ತಿದೆ. ದೈವತ್ವ ಮತ್ತು ಧಾರ್ಮಿಕ ಪಾವಿತ್ರ್ಯವನ್ನು ಬದಿಗೊತ್ತಿ ದೇವಾಲಯಗಳನ್ನು ವಾಣಿಜ್ಯೀಕರಿಸುವುದಕ್ಕೆ ಸರ್ಕಾರಕ್ಕೆ ಅನುಮತಿಸಲಾಗದು ಎಂದು ವಿವರಿಸಲಾಗಿದೆ.

1950ರ ಜನವರಿ 23ರಂದು ಹಿಂದಿನ ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರ ಹಾಗೂ ಭಾರತೀಯ ಗವರ್ನರ್‌ ಜನರಲ್‌ ಮತ್ತು ಮೈಸೂರಿನ ಮಹಾರಾಜರ ನಡುವೆ ನಡೆದಿರುವ ಒಪ್ಪಂದದಲ್ಲಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯ ಮತ್ತು ಇತರೆ ದೇವಾಲಯಗಳು ಖಾಸಗಿ ಆಸ್ತಿಗಳು ಎಂದು ಒಪ್ಪಂದ ಪಟ್ಟಿಯಲ್ಲಿ 62ನೇ ಅಂಶದಲ್ಲಿ ಉಲ್ಲೇಖವಾಗಿವೆ. ಗಣರಾಜ್ಯದ ಸಂದರ್ಭದಲ್ಲಿ ಸ್ವತಂತ್ರ ರಾಜ್ಯದ ಮಹಾರಾಜರು ಹಾಗೂ ಭಾರತ ಸರ್ಕಾರದ ನಡುವಿನ ಒಪ್ಪಂದವನ್ನು ಸುಪ್ರೀಂ ಕೋರ್ಟ್‌ ಸಹ ಪರಿಗಣಿಸಿದೆ. ಹೀಗಾಗಿ, ಏಕಪಕ್ಷೀಯವಾಗಿ ಆ ಒಪ್ಪಂದದಲ್ಲಿ ತಿದ್ದುಪಡಿ, ಮಾರ್ಪಾಡು ಮಾಡಲು ಅವಕಾಶವಿಲ್ಲ. ಒಪ್ಪಂದದ ಮೂಲಕ ಖಾತರಿಪಡಿಸಿರುವ ಹಕ್ಕುಗಳನ್ನು ಸಂವಿಧಾನ 26ನೇ ತಿದ್ದುಪಡಿಯ ಬಳಿಕ 1972ರ ಅಕ್ಟೋಬರ್‌ 28ರಂದು ಮೆಮೊ ಮೂಲಕ ಭಾರತ ಸರ್ಕಾರವು ಮತ್ತೊಮ್ಮೆ ಪರಿಗಣಿಸಿದೆ ಎಂದು ವಿವರಿಸಲಾಗಿದೆ.

ಬೆಟ್ಟದಲ್ಲಿ ಚಾಮುಂಡಿ, ಮಹಾಬಲೇಶ್ವರ, ನಾರಾಯಣಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ಮತ್ತು ನಂದಿ ದೇವಾಲಯಗಳಿವೆ. ಹಿಂದಿನ ಮೈಸೂರು ರಾಜರು ಬೆಟ್ಟದಲ್ಲಿ ಕೊಠಡಿಗಳು, ಅಡುಗೆ ಮನೆ ಅಲ್ಲದೇ ಪ್ರಕರ್ಮಾ ಮತ್ತು ಗೋಪುರಗಳನ್ನು ನಿರ್ಮಿಸಿದ್ದಾರೆ. ರಾಜರು ಸಾಕಷ್ಟು ಬೆಲೆಬಾಳುವ ಆಭರಣ, ಬೆಳ್ಳಿಯನ್ನು ಭಕ್ತಿಯ ಭಾಗವಾಗಿ ದೇವರಿಗೆ ನೀಡಿದ್ದಾರೆ. ಸಂಪ್ರದಾಯ ಪ್ರಕಾರ ಶತಮಾನಗಳಿಂದಲೂ ದಿನನಿತ್ಯದ ಪೂಜೆಯು ಮೈಸೂರು ಮಹಾರಾಜರ ಹೆಸರಿನಲ್ಲಿ ಸಂಕಲ್ಪದೊಂದಿಗೆ ಆರಂಭವಾಗುತ್ತದೆ. ದಸರಾ ಬಳಿಕ ರಥೋತ್ಸವ ನಡೆಯಲಿದ್ದು, ಅಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ದೇವಸ್ಥಾನದ ಸುತ್ತಲೂ ರಥದಲ್ಲಿಟ್ಟು ಎಳೆಯಲಾಗುತ್ತದೆ. ಈ ಪೂಜೆಯಲ್ಲಿ ಮಹಾರಾಜರ ಕುಟುಂಬಸ್ಥರು ಪ್ರಾಥಮಿಕವಾಗಿ ಪೂಜೆ ನೆರವೇರಿಸುತ್ತಾರೆ. ದೇವಾಲಯದಲ್ಲಿ ನಡೆಯುವ ವರ್ಧಂತಿ ಮತ್ತು ವಿಶೇಷ ಪೂಜೆಗಳಲ್ಲಿ ರಾಜರ ಕುಟುಂಬದವರು ಅನಾದಿ ಕಾಲದಿಂದಲೂ ಭಾಗವಹಿಸುತ್ತಾರೆ. ರಾಜವಂಶಸ್ಥರು ದೇವಾಲಯದ ಅವಿಭಾಜ್ಯ ಅಂಗವಾಗಿದ್ದು, ಬೆಟ್ಟದಲ್ಲಿರುವ ಎಲ್ಲಾ ದೇವಾಲಯದೊಂದಿಗೆ ವಿಶೇಷ ಸಂಬಂಧ ಹೊಂದಿದ್ದಾರೆ ಎಂದು ವಿವರಿಸಲಾಗಿದೆ.

1870-81ರಲ್ಲಿ ಪ್ರಸನ್ನ ಕೃಷ್ಣ ಸ್ವಾಮಿ, ವರಹಾ ಸ್ವಾಮಿ, ಲಕ್ಷ್ಮಿನಾರಾಯಣ ಸ್ವಾಮಿ, ತ್ರಿನಯನೇಶ್ವರ ಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಾಲಯಗಳು ಮೈಸೂರು ಮಹಾರಾಜರ ಧಾರ್ಮಿಕ ಸಂಸ್ಥೆಗಳು ಎಂದು ಸರ್ಕಾರವು ಅರಮನೆ ನಿರ್ವಹಣೆಗೆ ನೀಡಿತ್ತು. 1908 ಅಕ್ಟೋಬರ್‌ 27ರಂದು ಸರ್ಕಾರಿ ಮುಜರಾಯಿ ಇಲಾಖೆಯಿಂದ ಕೈಬಿಟ್ಟ ಬಳಿಕ ಅಂದಿನ ಮೈಸೂರು ರಾಜರು ಶ್ರೀ ಚಾಮುಂಡೇಶ್ವರಿ ದೇವಾಲಯ ಸೇರಿ 12 ದೇವಾಲಯಗಳನ್ನು ಅರಮನೆ ಇಲಾಖೆಯಲ್ಲಿ ಇಟ್ಟುಕೊಂಡಿದ್ದರು ಎಂದು ವಿವರಿಸಲಾಗಿದೆ.

1950ರ ಜನವರಿ 23ರಂದು ಗಣರಾಜ್ಯದ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ಮೈಸೂರು ರಾಜ್ಯದ ನಡುವೆ ಒಪ್ಪಂದ ಏರ್ಪಟ್ಟಿದ್ದು, 29 ದೇವಾಲಯಗಳು ಹಾಗೂ ಇತರೆ ಖಾಸಗಿ ಆಸ್ತಿಗಳು ಮೈಸೂರು ಮಹಾರಾಜರ ಖಾಸಗಿ ಆಸ್ತಿಗಳು ಎಂದು ಹೇಳಲಾಗಿದೆ. ಇದರಲ್ಲಿ ನಿರ್ದಿಷ್ಟವಾಗಿ ಚಾಮುಂಡೇಶ್ವರಿ ದೇವಾಲಯ ಜೊತೆಗೆ ಅಡುಗೆ ಮನೆ, ಕಾರ್‌ ಷೆಡ್‌, ಮಂಟಪಗಳು ಸೇರಿವೆ. ಈ ಪಟ್ಟಿಯಲ್ಲಿ ಮಹಾಬಲೇಶ್ವರ, ನಾರಾಯಣಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ದೇವಾಲಯಗಳೂ ಸೇರಿವೆ. 1951 ಫೆಬ್ರವರಿ 6ರಂದು ಅಂದಿನ ಮೈಸೂರು ರಾಜ್ಯವು ಅರಮನೆ ಮುಜರಾಯಿ ಸಂಸ್ಥೆಗಳನ್ನು ಮೈಸೂರು ಮಹಾರಾಜರ ಖಾಸಗಿ ಆಸ್ತಿಗಳು ಎಂದು ಪರಿಗಣಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.