ಮನೆ ರಾಜಕೀಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಭೇಟಿಯಾದ ಪ್ರತಾಪ್ ಸಿಂಹ: ಸಾಮಾಜಿಕ ಮಾಧ್ಯಮಗಳಲ್ಲಿ ಪರ...

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಭೇಟಿಯಾದ ಪ್ರತಾಪ್ ಸಿಂಹ: ಸಾಮಾಜಿಕ ಮಾಧ್ಯಮಗಳಲ್ಲಿ ಪರ –ವಿರೋಧದ ಚರ್ಚೆ

0

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ರಾಜಕೀಯ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪರ –ವಿರೋಧದ ಚರ್ಚೆ ಜೋರಾಗಿದೆ.

Join Our Whatsapp Group

ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್‌ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ ಎಂದು ಪ್ರತಾಪ್ ಸಿಂಹ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

 ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನಿಮ್ಮ ಸ್ನೇಹಿತನೇ ಎಂದು ಪ್ರತಾಪ ಸಿಂಹ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪ ಸಿಂಹ  ಹೇಳಿಕೊಂಡಿದ್ದಾರೆ. ಇದು‌ ಗೋಡ್ಸೆ ಆರಾಧಕರ (ಬಿಜೆಪಿಯವರ) ಅಸಲಿ ಮುಖವಾಗಿದೆ. ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌ ಎಂಬುವುದಕ್ಕೆ ಇದೊಂದು ನಿದರ್ಶನ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್‌ ಅವರನ್ನು ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.

ಒಬ್ಬ ದಿಟ್ಟ ಲಿಂಗಾಯತ ಪ್ರತಿಭಾವಂತೆ, ಸಾಮಾಜಿಕ ಕಾರ್ಯಕರ್ತೆ, ಜನಪರ ಪತ್ರಕರ್ತೆಯ ಕೊಲೆ ಪ್ರಕರಣದ ಆರೋಪಿಯನ್ನು ಮೆರೆಸೋದು ಯಾರನ್ನು ಮೆಚ್ಚಿಸೋಕೆ ಪ್ರತಾಪ್ ಸರ್..? ಆರ್‌ಎಸ್‌ಎಸ್‌ ನಾಯಕರನ್ನು ಮೆಚ್ಚಿಸಬೇಕು ಅಂದರೆ ಬಸವಣ್ಣನ ಲಿಂಗಾಯತವನ್ನು ದ್ವೇಷಿಸಲೇಬೇಕು ಅಲ್ವಾ..? ನಿಮ್ಮ ಈ ನಡೆ ಇತ್ತೀಚಿನ ನಿಮ್ಮ ಲಿಂಗಾಯತ ವಿರೋಧಿ ಹೇಳಿಕೆಗಳಿಗೆ ತಾಳೆಯಾಗುವಂತಿದೆ ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.