ಮನೆ ಕಾನೂನು ಓಲಾ, ಉಬರ್ ಆಟೋ ಸೇವಾ ಶುಲ್ಕ: ಏಕಸದಸ್ಯ ಪೀಠದ ಆದೇಶಕ್ಕೆ ತಡೆಗೆ ದ್ವಿಸದಸ್ಯ ಪೀಠ ನಕಾರ

ಓಲಾ, ಉಬರ್ ಆಟೋ ಸೇವಾ ಶುಲ್ಕ: ಏಕಸದಸ್ಯ ಪೀಠದ ಆದೇಶಕ್ಕೆ ತಡೆಗೆ ದ್ವಿಸದಸ್ಯ ಪೀಠ ನಕಾರ

0

ಬೆಂಗಳೂರು: ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಅಗ್ರಿಗೇಟರ್​ಗಳ ಮೂಲಕ ಕಾಯ್ದಿರಿಸಿದ ಆಟೋ ರಿಕ್ಷಾ ಸೇವೆಗಳಿಗೆ ಶೇಕಡಾ 5ರಷ್ಟು ಮಾತ್ರ ಸೇವಾ ಶುಲ್ಕ ಪಡೆಯಬೇಕು ಎಂಬುದಾಗಿ ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್​​ ದ್ವಿಸದಸ್ಯ ಪೀಠ ನಿರಾಕರಿಸಿದೆ.

Join Our Whatsapp Group

ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಓಲಾ ಮತ್ತಿತರರ ಅಗ್ರಿಗ್ರೇಟರ್ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅಲ್ಲದೆ, ಅಂತಿಮ ವಿಚಾರಣೆಯನ್ನು ಆಗಸ್ಟ್ 29ರಂದು ನಡೆಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ಆದರೆ, ಏಕಸದಸ್ಯ ಪೀಠದ ಆದೇಶ ಪ್ರತಿಯನ್ನು ಭಾರತೀಯ ಸ್ಪರ್ಧಾ ಆಯೋಗದ ಅಧ್ಯಕ್ಷರಿಗೆ ಕಳುಹಿಸುವಂತೆ ರಿಜಿಸ್ಟ್ರಾರ್​​ಗೆ (ನ್ಯಾಯಾಂಗ) ನಿರ್ದೇಶಿಸಿ ಸೂಚಿಸಿದ್ದ ಆದೇಶಕ್ಕೆ ತಡೆ ನೀಡಿದೆ.

ವಿಚಾರಣೆ ವೇಳೆ ಉಬರ್ ಪರ ಹಾಜರಾದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ”ಉಬರ್ ಸಾರಿಗೆ ಸೇವಾ ಆಪರೇಟರ್ ಎಂದು ಏಕಸದಸ್ಯ ನ್ಯಾಯಪೀಠ ತಿಳಿಸಿದೆ. ಆದರೆ, ಅರ್ಜಿದಾರ ಸಂಸ್ಥೆಗಳು ಅಗ್ರಿಗೇಟರ್ ಆಗಿರುವುದರಿಂದ ಮತ್ತು ತನ್ನದೇ ಆದ ಕಾರುಗಳನ್ನು ಹೊಂದಿಲ್ಲ. ಹೀಗಾಗಿ ಏಕಸದಸ್ಯ ಪೀಠದ ಆದೇಶ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಜಿಪಿಎಸ್ ಸೇವೆ ಮತ್ತು ಡೇಟಾ ಸೆಂಟರ್​​​ನಂತಹ ಸೇವೆಗಳನ್ನು ಒದಗಿಸುವವರು ಅಗ್ರಿಗೇಟರ್‌ಗಳಾಗಿದೆ. ಅದನ್ನು ಗ್ರಾಹಕರು ಬಳಸುತ್ತಾರೆ ಮತ್ತು ನ್ಯಾಯಾಲಯವು ಹೇಳಿರುವಂತೆ ಸಾರಿಗೆ ಆಪರೇಟರ್ ಅಲ್ಲ” ಎಂದು ವಾದಿಸಿದ್ದರು.

”ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡುವ ಮಧ್ಯಂತರ ಆದೇಶ ನೀಡದಿದ್ದಲ್ಲಿ ಈ ಸಂಸ್ಥೆಗಳ ಕಾರ್ಯಾಚರಣೆಗಳು ಸ್ಥಗಿತಗೊಳ್ಳುತ್ತವೆ” ಎಂದು ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದರು.

ಆದರೆ, ನ್ಯಾಯಪೀಠ, ವಾದವನ್ನು ಸಂಪೂರ್ಣ ಆಲಿಸಿದ ಬಳಿಕ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿತು. ಅಲ್ಲದೆ, ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು.