ಮನೆ ರಾಜ್ಯ ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ರಾಷ್ಟ್ರಕ್ಕೆ ಮಾದರಿ – ಯಾವುದೇ ಬದಲಾವಣೆ ಅಗತ್ಯವಿಲ್ಲ: ಸಚಿವ ಎನ್‌...

ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ರಾಷ್ಟ್ರಕ್ಕೆ ಮಾದರಿ – ಯಾವುದೇ ಬದಲಾವಣೆ ಅಗತ್ಯವಿಲ್ಲ: ಸಚಿವ ಎನ್‌ ಎಸ್‌ ಭೋಸರಾಜು

0

ವಿರಾಜಪೇಟೆ: ಕರ್ನಾಟಕ ರಾಜ್ಯದ ಗ್ಯಾರೆಂಟಿ ಯೋಜನೆಗಳು ರಾಷ್ಟ್ರಕ್ಕೆ ಮಾದರಿಯಾಗಿವೆ, ಇವುಗಳಲ್ಲಿ ಯಾವುದೇ ಬದಲಾವಣೆಯ ಅವಶ್ಯಕತೆಯಿಲ್ಲ ಹಾಗೂ ಆ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತವಾರಿ ಸಚಿವರಾದ ಎನ್‌ ಎಸ್‌ ಭೋಸರಾಜು ಪ್ರತಿಕ್ರಿಯಿಸಿದರು.

Join Our Whatsapp Group

ಇಂದು ವಿರಾಜಪೇಟೆ ತಾಲ್ಲೂಕಿನ ಬೊಳ್ಳಮಾಡು ಗ್ರಾಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ “ಬೇಲ್‌ ನಮ್ಮೆ” ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಯೋಜನೆಗಳಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳ ಅನ್ವಯ ಹಲವಾರು ರಾಜ್ಯಗಳು ಇದೇ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪರಿಣಾಮಗಳ ಬಗ್ಗೆ ಚರ್ಚೆ ಆಗಿದೆಯೇ ಹೊರತು, ಅವುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಯಾವುದೇ ಚರ್ಚೆಗಳು ಆಗಿಲ್ಲ. ಈ ಯೋಜನೆಗಳೂ ಯಥಾಸ್ಥಿತಿಯಲ್ಲಿಯೇ ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿದರು.

ಏಐಸಿಸಿ ವತಿಯಿಂದ ಆಯೋಜಿಸಲಾಗಿರುವ ಎಲ್ಲಾ ರಾಜ್ಯದ ರಾಜ್ಯಾಧ್ಯಕ್ಷರುಗಳ ಸಭೆಯಲ್ಲಿ ಪಾಲ್ಗೊಳ್ಳಲು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಚರ್ಚೆ ಮಾಡಲು ಅಲ್ಲ. ಸಚಿವ ಸಂಪುಟ ಪುನರ್ರಚನೆ ಕೇವಲ ಉಹಾಪೋಹ ಎಂದು ಹೇಳಿದರು.