ಮನೆ ರಾಜ್ಯ ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

0

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೈಸೂರಿನ ಯಾದವಗಿರಿಯ ರೈಲ್ವೆ  ಕ್ರೀಡಾ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

Join Our Whatsapp Group

ಮೈಸೂರಿನ ವಿಭಾಗೀಯ ರೈಲ್ವೆ  ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಆಚರಣೆಯ ನೇತೃತ್ವ ವಹಿಸಿದ್ದು, ವಿವಿಧ ಇಲಾಖೆಗಳ ಹಿರಿಯ ಶಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಗರ್ವಾಲ್ ಮಾತನಾಡಿ, ಮೈಸೂರು ರೈಲ್ವೆ ಪರಿವಾರ, ಪ್ರಯಾಣಿಕರು, ಗ್ರಾಹಕರು, ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಸದಸ್ಯರಿಗೆ ಮತ್ತು ಇತರ ಸಂಘಗಳು ಹಾಗು ಮಾಧ್ಯಮಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಪೂರ್ವಜರು ಮಾಡಿದ ತ್ಯಾಗವನ್ನು ಸ್ಮರಿಸುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು.

ಮೈಸೂರು ವಿಭಾಗವು 6.7 ದಶಲಕ್ಷ ಟನ್ ಸರಕು ಸಾಗಣೆಯನ್ನು ದಾಖಲಿಸಿದ್ದು, ₹542.39 ಕೋಟಿಗಳಷ್ಟು ಗಣನೀಯ ಆದಾಯವನ್ನು ಗಳಿಸಿದೆ. ವಿಭಾಗವು ‘ನೆಟ್ ಟನ್ ಕಿ.ಮಿ’. (NTKM) ಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 6.2% ಸುಧಾರಣೆಯನ್ನು ಕಂಡಿದ್ದು, 1595.7 ದಶಲಕ್ಷ ತಲುಪಿದೆ. ಹಾಗೆಯೆ ‘ಗ್ರಾಸ್ ಟನ್ ಕಿಲೋಮೀಟರ್ಸ್’ (GTKM)ನಲ್ಲಿ 2.2% ಹೆಚ್ಚಳವನ್ನು ಕಂಡಿದ್ದು, 2673 ದಶಲಕ್ಷ ತಲುಪಿದೆ. ಗಮನಾರ್ಹವಾಗಿ, ವಿಭಾಗವು 19 ರೇಕ್‌ಗಳ ಕಬ್ಬಿಣದ ಅದಿರನ್ನು ಯಶಸ್ವಿಯಾಗಿ ರಫ್ತು ಮಾಡಿ ₹ 57.06 ಕೋಟಿ ಗಳಿಸಿದೆ ಮತ್ತು ಆಟೋಮೊಬೈಲ್ ಲೋಡಿಂಗ್‌ನಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದೂ, 12 ರೇಕ್‌ಗಳನ್ನು ಲೋಡ್ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 183.3% ಹೆಚ್ಚಳವಾಗಿದೆ.

ಪ್ರಯಾಣಿಕರ ಸೇವೆಗಳ ವಿಷಯದಲ್ಲಿ ವಿಭಾಗವು 19.02 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು ₹242.89 ಕೋಟಿ ಆದಾಯವನ್ನು ಗಳಿಸಿದೆ. ಹಲವಾರು ಸುರಕ್ಷತಾ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ಸಹ ಜುಲೈ 2024 ರವರೆಗೆ ವಿಭಾಗದ ಸಮಯಪಾಲನೆಯ ಕಾರ್ಯಕ್ಷಮತೆಯು ಶ್ಲಾಘನೀಯ 94% ನಲ್ಲಿದೆ ಎಂದು ಹೆಮ್ಮೆಯಿಂದ ತಿಳಿಸಿದರು.

ರೈಲು ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಮತ್ತು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು 52 ತಾತ್ಕಾಲಿಕ ಮತ್ತು 23 ಶಾಶ್ವತ ಕೋಚ್‌ಗಳನ್ನು ಸೇರಿಸಲಾಗಿದೆ ಮತ್ತು 7 ಹೆಚ್ಚುವರಿ ಬೋಗಿಗಳನ್ನು ಪ್ಯಾಸೆಂಜರ್ ಮತ್ತು ಮೇಲ್/ಎಕ್ಸ್‌ ಪ್ರೆಸ್ ರೈಲುಗಳಿಗೆ ಲಗತ್ತಿಸಲಾಗಿದೆ. ವಿಭಾಗದಲ್ಲಿ ಒಟ್ಟು 59 ವಿಶೇಷ ರೈಲುಗಳನ್ನು ಓಡಿಸಲಾಗಿದೆ ಎಂದು ತಿಳಿಸಿದರು.

ಅಮೃತ್ ಭಾರತ್ ಸ್ಟೇಷನ್ಸ್ ಸ್ಕೀಮ್” ಅಡಿಯಲ್ಲಿ ಹದಿನೈದು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿ ಒಟ್ಟು ₹ 385 ಕೋಟಿ ಹೂಡಿಕೆ ಮಾಡಿರುವ ಬಗ್ಗೆ ತಿಳಿಸಿದರು. ಹೆಚ್ಚುವರಿಯಾಗಿ, ವಿಭಾಗದಲ್ಲಿ ವಿದ್ಯುದ್ದೀಕರಣ ಕಾರ್ಯವನ್ನು ಮುಂದುವರೆಸುವಲ್ಲಿ ಮಹತ್ವದ ಕೆಲಸವಾಗಿದ್ದೂ, ಮೈಸೂರು – ಹಾಸನ ವಿಭಾಗದ ರಾಮಗಿರಿ ಮತ್ತು ಮಂದಗೆರೆಯಲ್ಲಿ ಎರಡು ‘ಟ್ರಾಕ್ಷನ್ ಸಬ್‌ಸ್ಟೇಷನ್‌’ಗಳನ್ನು ನಿಯೋಜಿಸಿದೆ. ವಿಭಾಗದ 135.90 ಕಿಮೀಗಳಲ್ಲಿ ರೈಲ್ವೆ ವೇಗವನ್ನು 110 ಕಿಮೀಗೆ ಏರಿಸಲಾಗಿದೆ ಮತ್ತು 16 ಕಿಮೀಗಳ ಲೂಪ್ ಲೈನ್ ನಲ್ಲಿ ವೇಗವನ್ನು 30 ಕಿಮೀಗೆ ಸುಧಾರಿಸಲಾಗಿದೆ. ಒಟ್ಟಾರೆ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ಹಳಿ ನವೀಕರಣ ಮತ್ತು ವೆಲ್ಡಿಂಗ್ ಯೋಜನೆಗಳನ್ನು ಸಹ ಪೂರ್ಣಗೊಳಿಸಲಾಗಿದೆ. ಹೆಚ್ಚುವರಿಯಾಗಿ ಹಾಸನ-ಮಂಗಳೂರು ವಿಭಾಗದ ಕಬಕಪುತ್ತೂರು ಬಳಿಯ ಸೇತುವೆ ಸಂ. 520 ರ ಬದಲಿಗೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ ಮತ್ತು ಇತರ ಎರಡು ಲೆವೆಲ್ ಕ್ರಾಸಿಂಗ್‌ಗಳನ್ನು ಪ್ರಸಕ್ತ ವರ್ಷದಲ್ಲಿ ವಿಭಾಗದಲ್ಲಿ ಮುಚ್ಚಲಾಗಿದೆ.

ಇದರೊಂದಿಗೆ ವಿಭಾಗದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಸಂಚಾರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಸುಧಾರಿಸಲು 110 ಕೋಟಿ ವೆಚ್ಚದಲ್ಲಿ 24 ಪ್ರಮುಖ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಗಳಲ್ಲಿ ಮೈಸೂರು, ಅಶೋಕಪುರಂ, ಹಾಸನ ಮತ್ತು ನಾಗನಹಳ್ಳಿಯಲ್ಲಿ ಟರ್ಮಿನಲ್ ಯಾರ್ಡ್‌ಗಳ ಅಭಿವೃದ್ಧಿ; ಬೆಳಗುಳ ಮತ್ತು ಕೃಷ್ಣರಾಜನಗರ ನಿಲ್ದಾಣಗಳಲ್ಲಿ ರನ್ನಿಂಗ್ ಲೈನ್‌ಗಳ ಸೇರ್ಪಡೆ; ವಿಭಾಗದಾದ್ಯಂತ 46 ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಮತ್ತು 38 ನಿಲ್ದಾಣಗಳಲ್ಲಿ ನೀರಿನ ಸೌಲಭ್ಯಗಳೊಂದಿಗೆ ಶೌಚಾಲಯಗಳನ್ನು ಒದಗಿಸುವುದು; ಶಿವಮೊಗ್ಗ ಸಮೀಪದ ಕೋಟೆಗಂಗೂರು ಮತ್ತು ಹೊಳೆನರಸೀಪುರ ಸಮೀಪದ ಅಣ್ಣೇಚಾಕನಹಳ್ಳಿಯಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣಗಳ ನಿರ್ಮಾಣ; ವಂದೇ ಭಾರತ್ ರೈಲಿನ ಮಾರ್ಗಗಳಲ್ಲಿ 34.05 ಕಿ.ಮೀ ಗಳಿಗೆ ‘ಡಬ್ಲ್ಯೂ-ಬೀಮ್’ ಲೋಹದ ಅಡೆತಡೆಗಳೊಂದಿಗಿನ ಸುರಕ್ಷತಾ ಬೇಲಿ ಮತ್ತು 130 ಕಿಮೀ/ಗಂ ವೇಗವನ್ನು ಮೀರಿದ ಮಾರ್ಗಗಳಲ್ಲಿ ಒಟ್ಟೂ 102.3 ಕಿಮೀಗಳಿಗೆ ಬೇಲಿಯನ್ನು ಒದಗಿಸುವುದು ಸೇರಿವೆ. ಅಷ್ಟೆ ಅಲ್ಲದೆ, ಚಿತ್ರದುರ್ಗ ಸಮೀಪದ ಹಳಿಯೂರಿನಲ್ಲಿ ಹೊಸ ಸರಕು ಸಾಗಣೆ ಟರ್ಮಿನಲ್, ಸಾಸಲು ನಿಲ್ದಾಣದಲ್ಲಿ ಸರಕು ಸಾಗಣೆ ಟರ್ಮಿನಲ್ ಅಭಿವೃದ್ಧಿ ಮತ್ತು ಬೀರೂರು-ಹುಬ್ಬಳ್ಳಿ ಮಾರ್ಗವನ್ನು ಬೀರೂರು-ತಾಳಗುಪ್ಪ ಮಾರ್ಗದೊಂದಿಗೆ ಸಂಪರ್ಕಿಸುವ ಹೊಸ ಬೈಪಾಸ್ ಮಾರ್ಗವನ್ನು ಸಹ ಮಂಜೂರು ಮಾಡಲಾಗಿದೆ.

ಅಗರ್ವಾಲ್ ರವರು ಘಾಟ್ ಭಾಗದಲ್ಲಿ ಇತ್ತೀಚಿಗಿನ ಭೂಕುಸಿತಗಳನ್ನು ನಿಭಾಯಿಸುವಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪ್ರಯತ್ನಗಳನ್ನು ವಿಶೇಷವಾಗಿ ಶ್ಲಾಘಿಸಿದರು. ಜುಲೈ 26, 2024 ರಂದು ಕಿಮೀ 63/100 – 200 ರಲ್ಲಿ ಗಮನಾರ್ಹ ಭೂಕುಸಿತ ಸಂಭವಿಸಿ ಇದು ಯಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವಿನ ಸಣ್ಣ ಸೇತುವೆ ಸಂಖ್ಯೆ 212 ರಲ್ಲಿ ತೀವ್ರ ರೈಲು ದಂಡೆ ಸವೆತಕ್ಕೆ ಕಾರಣವಾಯಿತು. ತೀವ್ರ ಸವಾಲಿನ ಭೂಪ್ರದೇಶದಲ್ಲಿನ ಸುರಂಗ ಸಂಖ್ಯೆ 13 ಮತ್ತು ಸುರಂಗ ಸಂಖ್ಯೆ 14 ರ ನಡುವೆ ಆದ ಈ ಭೂಕುಸಿತವು ಒಂದು ದೊಡ್ಡ ಸವಾಲನ್ನು ಒಡ್ಡಿತ್ತು. ರೈಲ್ವೆ ತಂಡವು ದಣಿವರಿಯಿಲ್ಲದೆ ಕೆಲಸ ಮಾಡಿ ಕೇವಲ 8 ದಿನಗಳ ದಾಖಲೆಯ ಸಮಯದಲ್ಲಿ ಸರಕು ರೈಲು ಸೇವೆಗಳನ್ನು ಮತ್ತು ಕೇವಲ 12 ದಿನಗಳ ದಾಖಲೆಯ ಸಮಯದಲ್ಲಿ ಪ್ರಯಾಣಿಕರ ರೈಲು ಸೇವೆಗಳನ್ನು ಒದಗಿಸುವಂತೆ ಮಾಡಿತು. ದುರದೃಷ್ಟವಶಾತ್, ಇದೇ ಮಾರ್ಗದಲ್ಲಿ ಬಾಲುಪೇಟೆ ಮತ್ತು ಸಕಲೇಶಪುರ ನಡುವೆ ಮತ್ತೆ ಭೂಕುಸಿತ ಸಂಭವಿಸಿದ್ದು, ನಾಲ್ಕು ದಿನಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ಈ ಸವಾಲುಗಳ ನಡುವೆಯೂ ಆಗಸ್ಟ್ 14 ರಂದು ರೈಲು ಸೇವೆಗಳನ್ನು ಯಶಸ್ವಿಯಾಗಿ ಪುನಃ ಪ್ರಾರಂಬಿಸಲಾಯಿತು. ಜುಲೈ ಮತ್ತು ಆಗಸ್ಟ್‌ ನಡುವೆ 30 ದಿನಗಳ ಅವಧಿಯಲ್ಲಿ ಈ ಘಾಟ್ ವಿಭಾಗದಲ್ಲಿ 3500 ಮಿ.ಮೀ ಗಿಂತ ಹೆಚ್ಚು ಮಳೆ ಸುರಿದಿರುವ ನಡುವೆಯೂ ಕೆಲಸ ಮಾಡಿರುವ ಇಂಜಿನಿಯರ್‌ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮ ವಿಶೇಷವಾಗಿ ಶ್ಲಾಘನೀಯ ಎಂದರು.

ವಿಭಾಗದಲ್ಲಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆಗಳನ್ನು ಪ್ರಮುಖ ಆದ್ಯತೆಗಳನ್ನಾಗಿ ಮಾಡಿ ಒತ್ತು ನೀಡಲಾಗಿದೆ. ಸಕಲೇಶಪುರದಲ್ಲಿ ವಿಪತ್ತು ಸನ್ನದ್ಧತೆಯನ್ನು ಉತ್ತಮಗೊಳಿಸಲು ವಿವಿಧ ತುರ್ತು ಪ್ರತಿಕ್ರಿಯೆ ಏಜೆನ್ಸಿಗಳನ್ನು ಒಳಗೊಂಡ ಒಂದು ಬೃಹತ್ ಅಣಕು ಕವಾಯತ್ತನ್ನು ನಡೆಸಲಾಯಿತು. ವಿಭಾಗವು SMS-ಆಧಾರಿತ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಿ ಸುಮಾರು 4175 ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳನ್ನು ಇದರ ಮುಖಾಂತರ ತಲುಪಲಾಯಿತು ಮತ್ತು ಸುಮಾರು 230 ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ರಸ್ತೆ ಬಳಕೆದಾರರಿಗೆ 34,50,000 SMS ಸಂದೇಶಗಳನ್ನು ಕಳುಹಿಸಿ ಸುರಕ್ಷತೆಯ ಮಹತ್ವವನ್ನು ಸಾರಲಾಯಿತು.

ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಸಿಬ್ಬಂದಿ ಕಲ್ಯಾಣಕ್ಕೆ ಕೈಗೊಂಡ ಉಪಕ್ರಮಗಳು ಪ್ರಮುಖವಾಗಿ ಕಾಣಿಸಿಕೊಂಡವು. ಶ್ರೀಮತಿ ಅಗರ್ವಾಲ್ ರವರು ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಘಟಕ ಮತ್ತು ವಾರ್ಡ್‌ನ ನವೀಕರಣವನ್ನು ಮಾಡಿ ಹೊಸ ವೈದ್ಯಕೀಯ ಉಪಕರಣಗಳ ಖರೀದಿಯೊಂದಿಗೆ ವಿಭಾಗವು ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದೆ ಎಂದು ತಿಳಿಸಿದರು. CFTRI ವಿಜ್ಞಾನಿಗಳು ಮತ್ತು JSS ಆಸ್ಪತ್ರೆಯ ಸಹಯೋಗದೊಂದಿಗೆ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಮೂಲಕ ಆರೋಗ್ಯಕರ ಆಹಾರ ಮತ್ತು ಮಾನಸಿಕ ಆರೋಗ್ಯದ ಸುಧಾರಣೆ ಉತ್ತೇಜಿಸುವಲ್ಲಿನ ಮೈಸೂರು ವಿಭಾಗದ ಪ್ರಯತ್ನಗಳನ್ನು ಅವರು ಪ್ರಸ್ತಾಪಿಸಿದರು. ವಿಶ್ವ ಪರಿಸರ ದಿನದಂದು ವಿಭಾಗದಾದ್ಯಂತ ನಡೆಸಿದ 7000 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮ ಮತ್ತು ಸಿಬ್ಬಂದಿ ಕ್ವಾರ್ಟರ್ಸ್‌ಗಳಲ್ಲಿ 691 ವಿದ್ಯುತ್ ‘ಪ್ರಿಪೇಯ್ಡ್ ಸ್ಮಾರ್ಟ್ ಎನರ್ಜಿ ಮೀಟರ್‌’ಗಳ ಸ್ಥಾಪನೆಯಂತಹ ಪರಿಸರ ರಕ್ಷಣೆ ಉಪಕ್ರಮಗಳನ್ನು ಶ್ಲಾಘಿಸಲಾಯಿತು.

ತಮ್ಮ ಸಮಾರೋಪ ಭಾಷಣದಲ್ಲಿ, ಅಗರ್ವಾಲ್ ರವರು ಎಲ್ಲಾ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ಷಮತೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ತೋರಿಸಲು ಮತ್ತು ಭಾರತೀಯ ರೈಲ್ವೆಯಲ್ಲಿ ನಡೆಯುತ್ತಿರುವ ಪರಿವರ್ತನೆಗೆ ಕೊಡುಗೆ ನೀಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ವಿನಾಯಕ್ ನಾಯ್ಕ್ ಮತ್ತು ಇ.ವಿಜಯಾ ಹಾಗು ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.