ಮನೆ ಮನರಂಜನೆ “ಕೃಷ್ಣಂ ಪ್ರಣಯ ಸಖಿ’ ಚಿತ್ರ ವಿಮರ್ಶೆ

“ಕೃಷ್ಣಂ ಪ್ರಣಯ ಸಖಿ’ ಚಿತ್ರ ವಿಮರ್ಶೆ

0

ಇಲ್ಲಿ ಕೃಷ್ಣ ಎಂಬ ಸುಂದರ ಯುವಕನಿದ್ದಾನೆ, ಸಿಕ್ಕಾಪಟ್ಟೆ ಸುಶಿಕ್ಷಿತ ಶ್ರೀಮಂತ. ಆತನಿಗೊಂದು ದೊಡ್ಡ ಫ್ಯಾಮಿಲಿ.. ಕೃಷ್ಣನ ಮದುವೆ ಮಾತುಕತೆ ಆಗುತ್ತಲೇ ಇರುತ್ತದೆ. ಆದರೆ, ಮದುವೆ ಮಾತ್ರ ಆಗುವುದಿಲ್ಲ. ಇಂತಿಪ್ಪ ಕೃಷ್ಣನ ಬಾಳಲ್ಲಿ “ಆಕೆ’ ಬರುತ್ತಾಳೆ, ಇದು “ಈಕೆ’ಯನ್ನು ಕೆರಳಿಸುತ್ತದೆ. ಮುಂದಾ? ಇದು ಚಿತ್ರಮಂದಿರದಲ್ಲಿ ಒಳ್ಳೆಯ ಅನುಭವ ಕೊಡುವ ಸಿನಿಮಾ.

Join Our Whatsapp Group

 “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ಫ್ಯಾಮಿಲಿಗಾಗಿ, ಫ್ಯಾಮಿಲಿಯಿಂದ, ಫ್ಯಾಮಿಲಿಗೋಸ್ಕರ ಮಾಡಿರುವ ಸಿನಿಮಾ. ಇಷ್ಟು ಹೇಳಿದ ಮೇಲೆ ಮನರಂಜನೆಗೆ ಕೊರತೆ ಇರಲ್ಲ ಎಂದು ನೀವು ಅಂದುಕೊಳ್ಳಬಹುದು.

ನಿರ್ದೇಶಕ ಶ್ರೀನಿವಾಸರಾಜುಗೆ ಒಂದು ಮ್ಯೂಸಿಕಲ್‌ ಲವ್‌ ಸ್ಟೋರಿಯನ್ನು ಕಲರ್‌ಫ‌ುಲ್‌ ಹಾಗೂ ಅದ್ಧೂರಿ ಫ್ರೇಮ್‌ನಲ್ಲಿ ಕಟ್ಟಿಕೊಡುವ ಕನಸು. ಈ ಮೂಲಕ “ದಂಡುಪಾಳ್ಯ’ದ ರಕ್ತವನ್ನು ಒರೆಸಿ ಬಿಸಾಕುವ ಉಮೇದು. ಅದಿಲ್ಲಿ ಚೆನ್ನಾಗಿ ಕೆಲಸ ಮಾಡಿದೆ. ಕಥೆಗಿಂತ ಸನ್ನಿವೇಶ ಹಾಗೂ ಪ್ರೇಕ್ಷಕರಿಗೆ ಆ ಕ್ಷಣದಲ್ಲಿ ಸಿಗುವ ಖುಷಿಯೇ ಹೆಚ್ಚು ಸುಖ ನೀಡುತ್ತದೆ ಎಂದು ನಿರ್ದೇಶಕರು ಬಲವಾಗಿ ನಂಬಿದ್ದಾರೆ. ಹಾಗಾಗಿ, ಇಡೀ ಸಿನಿಮಾ ಜಾಲಿರೈಡ್‌… ಕ್ರೈಮ್‌, ಹಾರರ್‌, ಆ್ಯಕ್ಷನ್‌ನಂತಹ ಡಾರ್ಕ್‌ ಶೇಡ್‌ ಸಿನಿಮಾಗಳ ಮಧ್ಯೆ ಮನೆಮಂದಿ ಜೊತೆಯಾಗಿ ಸಿನಿಮಾವನ್ನು ಎಂಜಾಯ್‌ ಮಾಡಬೇಕೆಂಬ ಸ್ಪಷ್ಟ ಉದ್ದೇಶದೊಂದಿಗೆ ಶ್ರೀನಿವಾಸ ರಾಜು ಮಾಡಿರುವ ಸಿನಿಮಾವಿದು. ಅವರ ಆ ಪ್ರಯತ್ನ ಫ‌ಲಿಸಿದೆ.

ಒಬ್ಬ ಶ್ರೀಮಂತ ಹುಡುಗನ ಮದುವೆ ಪುರಾಣದಿಂದ ಆರಂಭವಾಗಿ ಆತನ ಮಧ್ಯಮ ವರ್ಗದ “ಹುಡುಗ’ನಾಗಿ ನಾಯಕಿಯ ಮನಸ್ಸು ಗೆಲ್ಲಲು ಮುಂದಾಗುವುರೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಕಥೆಯ ಎಳೆ ತೀರಾ ಹೊಸದಂತೆ ಕಾಣದೇ ಹೋದರೂ ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ರೀತಿ ಮಾತ್ರ

ಹೊಸದಾಗಿದೆ. ಪ್ರೇಕ್ಷಕನಿಗೆ ಇಲ್ಲಿ ಇರೋದು ಎರಡೇ ಆಯ್ಕೆ, ಒಂದಾ ನಗಬೇಕು, ಇಲ್ಲ ಹಾಡುಗಳನ್ನು ಎಂಜಾಯ್‌ ಮಾಡಬೇಕು.. ಹಾಗಾಗಿ, ಇಲ್ಲಿ ಆಗಾಗ ಹಾಡುಗಳು ತೆರೆದುಕೊಳ್ಳುತ್ತವೆ. ಜೊತೆಗೆ ಪ್ರತಿ ಸನ್ನಿವೇಶಗಳಲ್ಲೂ ಕಾಮಿಡಿ ಪಂಚ್‌ಗಳು ತುಂಬಿವೆ. ಇದೇ ಕಾರಣದಿಂದ ಸಿನಿಮಾ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾ ಸಾಗುತ್ತದೆ. ಇಲ್ಲಿ ಹೆಚ್ಚೇನು ತಲೆಗೆ ಹುಳ ಬಿಡುವ, ಎದೆಯೊಳಗೆ ಕೈ ಹಾಕಿ ಪರಪರ ಅಂತ ಕೆರೆದುಕೊಳ್ಳುವಂತಹ “ಗಂಭೀರ’ ಸನ್ನಿವೇಶಗಳೇನು ಇಲ್ಲ. ಆ ಕ್ಷಣದ ಖುಷಿ ಆ ಕ್ಷಣಕ್ಕೆ… ಈ ಸಿನಿಮಾದ ಹೈಲೈಟ್‌ಗಳಲ್ಲಿ ಟ್ವಿಸ್ಟ್‌ಗಳು ಕೂಡಾ ಒಂದು.

ಸರಳವಾಗಿ ಸಾಗುವ ಈ ಕಥೆಯಲ್ಲಿ ಅಲ್ಲಲ್ಲಿ ಬರುವ ತಿರುವುಗಳು ಚಿತ್ರದ ಮಜಲು ಬದಲಿಸುವ ಜೊತೆಗೆ ಮಜ ನೀಡುತ್ತಾ ಸಾಗಿದೆ. ಇನ್ನು, ಮೊದಲೇ ಹೇಳಿದಂತೆ ಇದೊಂದು ಅದ್ಧೂರಿ ಸಿನಿಮಾ. ಇಲ್ಲಿನ ಲೊಕೇಶನ್‌ನಿಂದ ಹಿಡಿದು ಸಿನಿಮಾ ಪ್ರತಿ ಪಾತ್ರಗಳ ಕಾಸ್ಟೂéಮ್‌ ಕೂಡಾ ಅದಕ್ಕೆ ಪೂರಕವಾಗಿದೆ.

ನಾಯಕ ಗಣೇಶ್‌ ಕೃಷ್ಣನಾಗಿ ಮತ್ತೂಮ್ಮೆ ಮಿಂಚಿದ್ದಾರೆ. ಭಾವನಾತ್ಮಕವಾಗಿ ಒಂದಷ್ಟು ಏರಿಳಿತಗಳ ಪಾತ್ರದಲ್ಲಿ ಅವರು ಲೀಲಾಜಾಲವಾಗಿ ನಟಿಸಿ, ಮೆಚ್ಚುಗೆ ಪಡೆಯುತ್ತಾರೆ. ನಾಯಕಿ ಮಾಳವಿಕಾ ಸರಳ ಸುಂದರಿಯಾದರೆ, ಶರಣ್ಯಶೆಟ್ಟಿ ಹಾಟ್‌ ಬೆಡಗಿ. ಉಳಿದಂತೆ ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್‌, ಕುರಿ ಪ್ರತಾಪ್‌ ನಟಿಸಿ, ನಗಿಸಿದ್ದಾರೆ. ಚಿತ್ರದ ಸುಂದರ ಹಾಡುಗಳು ಕಥೆ ಹಾಗೂ ಸನ್ನಿವೇಶಕ್ಕೆ ಪೂರಕವಾಗಿದೆ.