ಮನೆ ರಾಷ್ಟ್ರೀಯ ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ-08 ಯಶಸ್ವಿ ಉಡಾವಣೆ

ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ-08 ಯಶಸ್ವಿ ಉಡಾವಣೆ

0

ಶ್ರೀಹರಿಕೋಟಾ(ಆಂಧ್ರಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭೂ ವೀಕ್ಷಣಾ ಉಪಗ್ರಹ-08 ಭೂ ಪರಿವೀಕ್ಷಣಾ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 (ಸಣ್ಣ ಉಪಗ್ರಹ ಉಡಾವಣಾ ವಾಹನ- ಡಿ3) ರಾಕೆಟ್​ ಅನ್ನು ಇಂದು ಬೆಳಗ್ಗೆ 9.17ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

Join Our Whatsapp Group

ಪಿಎಸ್​ಎಲ್​​ವಿ- ಸಿ58/ಎಕ್ಸ್​ಪೋಸಾಟ್​ ಹಾಗೂ ಜಿಎಸ್​ಎಲ್​ವಿ-ಎಫ್​14/ಇನ್​ಸಾಟ್​-3ಡಿಎಸ್​ ಮಿಷನ್​ಗಳ ಯಶಸ್ವಿ ಉಡಾವಣೆ ಬಳಿಕ 2024ರಲ್ಲಿ ಇದು ಇಸ್ರೋದ ಮೂರನೇ ಯಶಸ್ವಿ ಉಡಾವಣೆಯಾಗಿದೆ. ಈ ಮೂಲಕ ಚಂದ್ರಯಾನ-3ರ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಉಡಾವಣೆಯ 17 ನಿಮಿಷಗಳ ನಂತರ EOS-08 ಉಪಗ್ರಹ ಉದ್ದೇಶಿತ 475 ಮೀ. ವೃತ್ತಾಕಾರದ ಕಕ್ಷೆಯನ್ನು ಸೇರಿದೆ. ಉಡಾವಣೆ ನಂತರ ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ​, ​”ಎಸ್​ಎಸ್​ಎಲ್​ವಿ-ಡಿ3 ನೌಕೆ ಇಒಎಸ್-08 ಭೂ ಪರಿವೀಕ್ಷಣಾ ಉಪಗ್ರಹವನ್ನು ನಿಖರವಾಗಿ ಕಕ್ಷೆಗೆ ಸೇರಿಸಿತು” ಎಂದು ಮಾಹಿತಿ ಹಂಚಿಕೊಂಡಿದೆ.

ಇಸ್ರೋದ ಅಧ್ಯಕ್ಷ ಎಸ್​. ಸೋಮನಾಥ್​ ಮಾತನಾಡಿ, “ಎಸ್​ಎಸ್​ಎಲ್​ವಿಯ ಸರಣಿಯ ಮೂರನೇ ಅಭಿವೃದ್ಧಿ ನೌಕೆ, EOS-08 ಉಪಗ್ರಹವನ್ನು ಹೊತ್ತು ಸಾಗಿದ ಎಸ್‌ಎಸ್‌ಎಲ್‌ವಿ-ಡಿ3 ಉಡಾವಣೆ ಯಶಸ್ವಿಯಾಗಿದೆ. ರಾಕೆಟ್ ಯೋಜಿಸಿದಂತೆ ಬಾಹ್ಯಾಕಾಶ ನೌಕೆಯನ್ನು ಅತ್ಯಂತ ನಿಖರವಾದ ಕಕ್ಷೆಯಲ್ಲಿ ಇರಿಸಿದೆ. ಸದ್ಯದ ಯಾವುದೇ ತೊಂದರೆಗಳಿಲ್ಲ. ಟ್ರ್ಯಾಕಿಂಗ್ ನಂತರ ಅಂತಿಮ ಕಕ್ಷೆಯ ಬಗ್ಗೆ ತಿಳಿಯಲಿದೆ. ಸದ್ಯದ ಎಲ್ಲವೂ ಪರಿಪೂರ್ಣವಾಗಿದೆ” ಎಂದು ಹೇಳಿದ್ದಾರೆ.

“ಎಸ್‌ಎಸ್‌ಎಲ್‌ವಿ-ಡಿ3 ಯಶಸ್ಸಿನೊಂದಿಗೆ ಎಸ್‌ಎಸ್‌ಎಲ್‌ವಿ ಅಭಿವೃದ್ಧಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಇಸ್ರೋ ಘೋಷಿಸಿದೆ. ನಾವು SSLV ತಂತ್ರಜ್ಞಾನವನ್ನು ಉದ್ಯಮಕ್ಕೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು SSLV ಸರಣಿ ಉತ್ಪಾದನೆ ಮತ್ತು ಉಡಾವಣೆಗಾಗಿ ಇದು ಉತ್ತಮ ಆರಂಭವಾಗಿದೆ” ಎಂದು ಸೋಮನಾಥ್ ತಿಳಿಸಿದ್ದಾರೆ.

ಇಂದು ಉಡಾವಣೆ ಮಾಡಿರುವ ಎಸ್‌ಎಸ್‌ಎಲ್‌ವಿ-ಡಿ3 ನೌಕೆ, 157 ಕೆ.ಜಿ ಭಾರವಿರುವ ​ಇಒಎಸ್-08 ಹೊತ್ತು ಸಾಗಿದೆ. ಈ ಸಣ್ಣ ನೌಕೆ ಕೇವಲ 500 ಕೆ.ಜಿಯಷ್ಟು ಮಾತ್ರ ಬಾಹ್ಯಾಕಾಶಕ್ಕೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ವಾಣಿಜ್ಯೀಕರಣದ ಉದ್ದೇಶದಿಂದ ಇಸ್ರೋ ಅಭಿವೃದ್ಧಿಪಡಿಸಿದೆ. ನೌಕೆಯು ಕೇವಲ 2 ಮೀಟರ್ ವ್ಯಾಸ ಮತ್ತು 34 ಮೀಟರ್ ಉದ್ದವಿದೆ. ಸಣ್ಣ ಮತ್ತು ಸೂಕ್ಷ್ಮ ಉಪಗ್ರಹಗಳನ್ನು ಕಕ್ಷೆಯಲ್ಲಿ ಇರಿಸಲು ಬೇಕಾಗುವ ವೇಗವನ್ನು ಸರಿದೂಗಿಸಲು ಇದು ಮೂರು ಘನ ಇಂಧನ ಆಧಾರಿತ ಹಂತಗಳನ್ನು ಮತ್ತು ಅಂತಿಮ ದ್ರವ-ಇಂಧನ ಆಧಾರಿತ ಹಂತವನ್ನು ಬಳಸುತ್ತದೆ.

ಉಪಗ್ರಹವು ಎಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (EOIR), SAC, ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್- ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R), SAC ಮತ್ತು SiC UV ಡೋಸಿಮೀಟರ್, LEOS ಎನ್ನುವ ಮೂರು ಪೇಲೋಡ್‌ಗಳನ್ನು ಹೊತ್ತೊಯ್ದಿದೆ.