ಮನೆ ಅಪರಾಧ ಅಕ್ಕ-ತಮ್ಮನಿಂದ ಹನಿಟ್ರ್ಯಾಪ್‌ ದಂಧೆ: ಮೂವರು ಪೊಲೀಸರ ಬಲೆಗೆ

ಅಕ್ಕ-ತಮ್ಮನಿಂದ ಹನಿಟ್ರ್ಯಾಪ್‌ ದಂಧೆ: ಮೂವರು ಪೊಲೀಸರ ಬಲೆಗೆ

0

ಬೆಂಗಳೂರು: ಮಿಸ್ಡ್ ಕಾಲ್‌ ಕೊಟ್ಟು ಯುವಕರು ಹಾಗೂ ಕೆಲ ಪುರುಷರನ್ನು ಪರಿಚಯಿಸಿಕೊಂಡು ಬಳಿಕ ಹನಿಟ್ರ್ಯಾಪ್‌ ಮಾಡಿ, ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಅಕ್ಕ-ತಮ್ಮ ಸೇರಿ ಮೂವರು ಸಂಪಿಗೆಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Join Our Whatsapp Group

ಅಗ್ರಹಾರ ಲೇಔಟ್‌ ನಿವಾಸಿ ನಜ್ಮಾ ಕೌಸರ್‌ (38), ಈಕೆಯ ಸಹೋದರ ಮೊಹಮ್ಮದ್‌ ಖಲೀಲ್‌(24) ಹಾಗೂ ಹೆಗಡೆನಗರ ನಿವಾಸಿ ಮೊಹಮ್ಮದ್‌ ಅತೀಕ್‌ (30) ಬಂಧಿತರು.

ಆರೋಪಿತ ಗ್ಯಾಂಗ್‌ ಇತ್ತೀಚೆಗೆ ಸಂಪಿಗೆಹಳ್ಳಿ ನಿವಾಸಿ, ಡೆಲಿವರಿ ಬಾಯ್‌ ಕೃಷ್ಣ ಎಂಬಾತನನ್ನು ಹನಿಟ್ರ್ಯಾಪ್‌ ಮಾಡಿ ಮೊಬೈಲ್‌ ಹಾಗೂ ನಗದು ಸುಲಿಗೆ ಮಾಡಿತ್ತು. ಆರೋಪಿಗಳ ಪೈಕಿ ನಜ್ಮಾ ಕೌಸರ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕೌಟುಂಬಿಕ ವಿಚಾರವಾಗಿ ಪತಿಯಿಂದ ದೂರವಾಗಿ ಮಕ್ಕಳ ಜತೆ ವಾಸವಾಗಿದ್ದಾಳೆ.

ಈಕೆಯ ಸಹೋದರ ಮೊಹಮ್ಮದ್‌ ಖಲೀಲ್‌ ಯಾವುದೇ ಕೆಲಸಕ್ಕೆ ಹೋಗದೆ, ಅಕ್ಕನ ಅಕ್ರಮ ದಂಧೆಗೆ ಸಹಕಾರ ನೀಡುತ್ತಿದ್ದಾನೆ. ಇನ್ನು ಮೊಹಮ್ಮದ್‌ ಅತೀಕ್‌ ಪರಿಚಯಸ್ಥನಾಗಿದ್ದು, ಹಣ ಸಂಪಾದನೆಗಾಗಿ ಮೂವರು ಸಂಚು ರೂಪಿಸಿ ಹನಿಟ್ರ್ಯಾಪ್‌ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಸೇರಿ ಬೇರೆ ಬೇರೆ ಮಾರ್ಗಗಳಲ್ಲಿ ದೊರೆಯುವ ನಂಬರ್‌ ಗಳಲ್ಲಿ ಆಯ್ಕೆ ಮಾಡಿಕೊಂಡು ಕರೆ ಮಾಡಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಫ‌ುಡ್‌ವರಿ ಬಾಯ್‌ ಆಗಿರುವ ಕೃಷ್ಣಗೆ ಕೆಲ ದಿನಗಳ ಹಿಂದೆ ನಜ್ಮಾ ಮಿಸ್ಡ್ ಕಾಲ್‌ ಕೊಟ್ಟಿದ್ದಳು. ಅಪರಿಚಿತ ನಂಬರ್‌ ಆಗಿದ್ದರಿಂದ ಕೃಷ್ಣ ಕರೆ ಮಾಡಿದಾಗ ನಜ್ಮಾ ಕರೆ ಸ್ವೀಕರಿಸಿ ಮಾತನಾಡಿದ್ದಾಳೆ. ಈ ವೇಳೆಯೇ ತನ್ನ ಹೆಸರು ಉಲ್ಲೇಖಿಸಿ ಪರಿಚಯಸಿಕೊಂಡು ನಜ್ಮಾ, ಕೃಷ್ಣಗೆ ಪ್ರತಿ ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದಳು. ಈ ಮಧ್ಯೆ ಕೆಲ ದಿನಗಳ ಹಿಂದೆ ಸೆಕ್ಸ್‌ ವಿಚಾರ ಪ್ರಸ್ತಾಪಿಸಿದ ಆಕೆ, ಒಂದು ದಿನ ಇಬ್ಬರು ಸೇರೋಣ ಎಂದು ಆಮಿಷವೊಡ್ಡಿದ್ದಳು. ಆ ನಂತರ ತುರ್ತಾಗಿ ಹಣ ಬೇಕಾಗಿದೆ ಎಂದು ಕೃಷ್ಣನಿಂದ 1,400 ರೂ. ಅನ್ನು ಫೋನ್‌ ಪೇ ಮೂಲಕ ಪಡೆದುಕೊಂಡಿದ್ದಳು.

ಈ ಮಧ್ಯೆ ಆ.8 ರಂದು ಕೃಷ್ಣಗೆ ಕರೆ ಮಾಡಿದ ನಜ್ಮಾ, ಸೆಕ್ಸ್‌ ಮಾಡೋಣ ಬಾ ಎಂದು ಅಗ್ರಹಾರ ಲೇಔಟ್‌ ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಆತ ಬರುತ್ತಿದ್ದಂತೆ ನೇರವಾಗಿ ಬೆಡ್‌ ರೂಮ್‌ಗೆ ಕರೆದೊಯ್ದು ಆತನ ಪಕ್ಕ ಕುಳಿತುಕೊಂಡು ಕುಶಲೋಪರಿ ವಿಚಾರಿಸಿದ್ದಾಳೆ. ಅದೇ ಕ್ಷಣದಲ್ಲಿ ಇತರೆ ಇಬ್ಬರು ಆರೋಪಿಗಳು ಏಕಾಏಕಿ ಬೆಡ್‌ ರೂಮ್‌ ಗೆ ನುಗ್ಗಿ ತನ್ನ ತಂಗಿ ಜತೆ ಏನ್ಮಾಡುತ್ತಿದ್ದಿಯಾ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಕೃಷ್ಣನ ಮೊಬೈಲ್‌ ಕಸಿದುಕೊಂಡು, ಕೂಡಲೇ ಹಣ ಕೊಡು ಇಲ್ಲವಾದರೆ ಅತ್ಯಾಚಾರ ಕೇಸ್‌ ದಾಖಲಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿ, ಒಂದಷ್ಟು ಹಣ ಕಸಿದು ಕೊಂಡಿದ್ದಾರೆ. ಬಳಿಕ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದರು. ನಂತರ ಕೃಷ್ಣ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಎಫ್ ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಗಳ ವಿಚಾರಣೆಯಲ್ಲಿ ಇದುವರೆಗೂ ಸುಮಾರು 25-30 ಮಂದಿಗೆ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ. ಕನಿಷ್ಠ 5 ಸಾವಿರ ರೂ.ನಿಂದ 2 ಲಕ್ಷ ರೂ. ವರೆಗೆ ಹನಿಟ್ರ್ಯಾಪ್‌ ಮಾಡಿ ಹಣ ಸುಲಿಗೆ ಮಾಡಿದ್ದಾರೆ. ಆದರೆ, ಕೆಲವರು ಮಾರ್ಯಾದೆಗೆ ಹೆದರಿ ದೂರು ನೀಡಿಲ್ಲ. ಇನ್ನು ನಜ್ಮಾ, ಒಬ್ಬ ವ್ಯಕ್ತಿಗೆ ವಂಚಿಸಿದ ಬಳಿಕ, ಮನೆ ಬದಲಾಯಿಸುತ್ತಿದ್ದಳು. ಹೀಗೆ ಹೆಗಡೆನಗರ, ಅಗ್ರಹಾರ ಲೇಔಟ್‌ ಸೇರಿ ನಾಲ್ಕೈದು ಕಡೆಗಳಲ್ಲಿ ಹತ್ತಾರು ಮನೆಗಳನ್ನು ಬದಲಾಯಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು. ಸಂಪಿಗೆಹಳ್ಳಿ ಠಾಣಾಧಿಕಾರಿ ಎಂ.ಚಂದ್ರಶೇಖರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಂ ಗಳಲ್ಲಿ ಬಳಕೆದಾರರು ನೋಂದಾಯಿಸುವ ಮೊಬೈಲ್‌ ನಂಬರ್‌ಗಳನ್ನು ನಜ್ಮಾ ಮತ್ತು ತಂಡ ಕಳವು ಮಾಡುತ್ತಿತ್ತು. ಬಳಿಕ ಆ ನಂಬರ್‌ಗೆ ನಜ್ಮಾ ಮೂಲಕ ಕರೆ ಮಾಡಿಸಿ ಯುವಕರು ಅಥವಾ ಪುರುಷರನ್ನು ಹನಿಟ್ರ್ಯಾಪ್‌ ಖೆಡ್ಡಾಗೆ ಕೆಡವುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.