ಮನೆ ಕಾನೂನು ವಿದೇಶಿ ಕಂಪೆನಿ ಸಿಬ್ಬಂದಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ರದ್ದು

ವಿದೇಶಿ ಕಂಪೆನಿ ಸಿಬ್ಬಂದಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ರದ್ದು

0

ಬೆಂಗಳೂರು: ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸ್ವಿಟ್ಜರ್​​ಲ್ಯಾಂಡ್‌ನ ಜ್ಯೂರಿಚ್‌ನಲ್ಲಿರುವ ಸ್ವಿಸ್ ರೀಯಿನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ನಿರ್ದೇಶಕ ಹಾಗೂ ನಿಯಂತ್ರಣಾ ಮುಖ್ಯಸ್ಥ ಸೇರಿದಂತೆ ಇತರೆ 10 ಮಂದಿಯ ವಿರುದ್ಧದ ದಾಖಲಾಗಿದ್ದ ಪ್ರಕರಣವನ್ನು ಇಂದು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

Join Our Whatsapp Group

ಆದರೆ, ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಏಳನೇ ಆರೋಪಿಯಾಗಿರುವ ನೋಯೆಲ್ ಡಿ. ಸೋಜಾ ಎಂಬವರ ವಿರುದ್ಧ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ್ದು, ವಿಚಾರಣೆ ಎದುರಿಸಬೇಕಾಗಿದೆ.

ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಸಂಸ್ಥೆಯ ನಿರ್ದೇಶಕರಾದ ಮಿಸ್​ ಸಬಿನೆ ಬೇಚ್ಲರ್ ಎಂಬವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಪ್ರಕರಣ ಸಂಬಂಧ ದಾಖಲಾಗಿರುವ ದೂರನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಎಲ್ಲ ಆರೋಪಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ದಾಖಲಿಸಲಾಗಿದೆ ಎಂದು ಅಂಶ ಸ್ಟಷ್ಟವಾಗಲಿದೆ. ಅಲ್ಲದೆ, ದೂರಿನಲ್ಲಿ ಏಳನೇ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಇತರೆ ಆರೋಪಿಗಳ ವಿರುದ್ಧ ಯಾವುದೇ ಆರೋಪವನ್ನು ಸರಿಯಾದ ರೀತಿಯಲ್ಲಿ ವಿವರಿಸಿಲ್ಲ. ದೂರುದಾರರಿಗೆ ಮನಸ್ಸಿಗೆ ಬಂದವರನ್ನು ಪ್ರಕರಣದಲ್ಲಿ ಎಳೆದುತಂದು ಸಿಲುಕಿಸಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದಲ್ಲಿ ದೂರುದಾರ ಮಹಿಳೆ ವಿರುದ್ಧದ ಕೆಲವು ಆರೋಪಗಳು ಎದುರಾಗಿದ್ದು, ಅವು ಸಾಬೀತಾದ ಹಿನ್ನೆಲೆ ಸೇವೆಯಿಂದ ವಜಾಗೊಳಿಸಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಕಂಪನಿಯ ಇತರೆ ಅಧಿಕಾರಿಗಳ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆದರೆ, ಪ್ರಕರಣದ ಏಳನೇ ಆರೋಪಿ ವಿರುದ್ಧದ ಪ್ರಕರಣ ಗಂಭೀರವಾಗಿದ್ದು, ವಿಚಾರಣೆ ಮುಂದುವರೆಯಬೇಕಾಗಿದೆ ಎಂದು ತಿಳಿಸಿ, ಇತರೆ ಎಲ್ಲ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಸ್ವಿಟ್ಜರ್‌ಲ್ಯಾಂಡ್‌ ಜುರಿಚ್ ಎಂಬಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಮಾ ಸೇವೆ ಒದಗಿಸುತ್ತಿರುವ ಸ್ವಿಸ್ ರಿ-ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್‌ನ ಒಂದು ಘಟಕದಲ್ಲಿ ದೂರುದಾರರು ಲೆಕ್ಕ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಈ ನಡುವೆ ಪ್ರಕರಣದ ಏಳನೇ ಮತ್ತು 10ನೇ ಆರೋಪಿಗಳು ದೂರುದಾರರ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ಅಲ್ಲದೇ, ಅವರ ವಿರುದ್ಧದ ಆರೋಪಗಳು ಸಂಸ್ಥೆಯ ನಿರ್ದೇಶನಗಳ ಸಂಹಿತೆಯನ್ನು ಉಲ್ಲಂಘಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ನೀಡಿ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿತ್ತು.

ಈ ನಡುವೆ ಉದ್ಯೋಗದಿಂದ ತೆಗೆದು ಹಾಕಿದ ಪರಿಣಾಮ ಪರಿಹಾರ ನೀಡುವಂತೆ ಕೋರಿ 2019ರ ಮೇ 30ರಂದು ದೂರುದಾರರು ಕಂಪೆನಿ ವಿರುದ್ಧ ಸಿವಿಲ್ ಪ್ರಕರಣ ದಾಖಲಿಸಿದ್ದರು. ಇದಾದ ನಾಲ್ಕು ತಿಂಗಳ ಬಳಿಕ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.

ಈ ಸಂಬಂಧ ಕಂಪೆನಿಯ ವ್ಯವಸ್ಥಾಪಕರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದ್ದರು. ಆದರೆ, ದೂರುದಾರರ ಆರೋಪದಂತೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಉದ್ಯೋಗದಿಂದ ತೆಗೆದು ಹಾಕಿದ ಪರಿಣಾಮ ಅವರು ಈ ರೀತಿಯ ಆರೋಪ ಮಾಡುತ್ತಿರುವುದಾಗಿ ವಿವರಣೆ ನೀಡಿದ್ದರು.

ಇದಾದ ಬಳಿಕ 15 ತಿಂಗಳ ನಂತರ ದೂರುದಾರ ಮಹಿಳೆ ಕಂಪೆನಿಯ ಭಾರತದ ಘಟಕದಲ್ಲಿನ ಹಲವು ಮಂದಿಯ ವಿರುದ್ಧ 2021 ರಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ದೂರಿನಲ್ಲಿ ಪ್ರಕರಣದಲ್ಲಿನ ಏಳನೇ ಆರೋಪಿ ದೂರುದಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅದಕ್ಕೆ ಇತರೆ ಎಲ್ಲ ಆರೋಪಿಗಳು ಸಹಕರಿಸಿದ್ದಾರೆ. ಇದೇ ಕಾರಣದಿಂದ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ 12 ಮಂದಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.