ಮನೆ ಅಂತಾರಾಷ್ಟ್ರೀಯ ಗಾಜಾದ ಹಮಾಸ್​ ಉಗ್ರರ 40 ನೆಲೆಗಳ ಮೇಲೆ ಇಸ್ರೇಲ್ ದಾಳಿ: ಸೈನಿಕರನ್ನು ಕೊಂದುಹಾಕಿದ್ದೇವೆ ಎಂದ ಹಮಾಸ್

ಗಾಜಾದ ಹಮಾಸ್​ ಉಗ್ರರ 40 ನೆಲೆಗಳ ಮೇಲೆ ಇಸ್ರೇಲ್ ದಾಳಿ: ಸೈನಿಕರನ್ನು ಕೊಂದುಹಾಕಿದ್ದೇವೆ ಎಂದ ಹಮಾಸ್

0

ಗಾಜಾ ಪಟ್ಟಿಯ ಮಧ್ಯ ಭಾಗದಲ್ಲಿನ ಹಮಾಸ್​ ಉಗ್ರರ 40 ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದ್ದರೆ, ಗಾಜಾದ ದಕ್ಷಿಣ ಭಾಗದಲ್ಲಿ ತನ್ನ ಹೋರಾಟಗಾರರು ಕೆಲ ಇಸ್ರೇಲಿ ಸೈನಿಕರನ್ನು ಕೊಂದು ಹಲವರನ್ನು ಗಾಯಗೊಳಿಸಿದ್ದಾರೆ ಎಂದು ಹಮಾಸ್ ಪ್ರತಿಪಾದಿಸಿದೆ.

Join Our Whatsapp Group

ಕಳೆದ ಕೆಲವು ಗಂಟೆಗಳ ಅವಧಿಯಲ್ಲಿ ಇಸ್ರೇಲ್ ವಿಮಾನಗಳು ಗಾಜಾ ಪಟ್ಟಿಯಲ್ಲಿನ 40 ಭಯೋತ್ಪಾದಕ ನೆಲೆಗಳು ಸೇರಿದಂತೆ, ಮಿಲಿಟರಿ ಕಟ್ಟಡಗಳು, ಶಸ್ತ್ರಾಗಾರಗಳ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಅವಿಚೈ ಅಡ್ರೈ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಧ್ಯ ಗಾಜಾ ಪಟ್ಟಿಯಲ್ಲಿರುವ ಮಗಾಜಿ ನಿರಾಶ್ರಿತರ ಶಿಬಿರದ ಮಧ್ಯದಿಂದ ಇಸ್ರೇಲ್ ಕಡೆಗೆ ರಾಕೆಟ್​ಗಳು ಹಾರಿ ಬಂದಿರುವುದರಿಂದ ಅಲ್ಲಿನ ನಿರಾಶ್ರಿತರು ತಕ್ಷಣವೇ ಜಾಗ ಖಾಲಿ ಮಾಡುವಂತೆ ಮತ್ತೊಂದು ಪ್ರತ್ಯೇಕ ಹೇಳಿಕೆಯಲ್ಲಿ ಇಸ್ರೇಲ್ ತಿಳಿಸಿತ್ತು.

ಇದನ್ನು ಉಲ್ಲೇಖಿಸಿದ ಅವಿಚೈ ಅಡ್ರೈ, ಈ ಪ್ರದೇಶಗಳಿಂದ ಹಮಾಸ್ ನಿರಂತರವಾಗಿ ರಾಕೆಟ್​ಗಳನ್ನು ಹಾರಿಸುತ್ತಿರುವುದರಿಂದ ಜನರನ್ನು ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದೆ ಮತ್ತು ಈ ಪ್ರದೇಶದ ಮೇಲೆ ಸೈನ್ಯವು ತನ್ನ ಸಂಪೂರ್ಣ ಬಲಪ್ರಯೋಗಿಸಿ ತ್ವರಿತವಾಗಿ ದಾಳಿ ಮಾಡಲಿದೆ ಎಂದು ಒತ್ತಿ ಹೇಳಿದರು.

ಏತನ್ಮಧ್ಯೆ, ತನ್ನ ಹೋರಾಟಗಾರರು ಶನಿವಾರ ಗಾಜಾ ನಗರದ ದಕ್ಷಿಣ ಭಾಗದಲ್ಲಿ ಕೆಲ ಇಸ್ರೇಲಿ ಸೈನಿಕರನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದಾರೆ ಎಂದು ಹಮಾಸ್​ನ ಸಶಸ್ತ್ರ ವಿಭಾಗವಾದ ಅಲ್-ಖಸ್ಸಾಮ್ ಬ್ರಿಗೇಡ್ಸ್ ಹೇಳಿಕೊಂಡಿದೆ. ಗಾಜಾ ನಗರದ ದಕ್ಷಿಣಕ್ಕಿರುವ ತಾಲ್ ಅಲ್-ಹವಾ ಪ್ರದೇಶದಲ್ಲಿನ ಯೂನಿವರ್ಸಿಟಿ ಕಾಲೇಜಿನ ಸಮೀಪದಲ್ಲಿ ನಮ್ಮ ಹೋರಾಟಗಾರರು ಇಸ್ರೇಲ್​ನ ಎರಡು ಸೇನಾ ಜೀಪುಗಳ ಮೇಲೆ ಬಾಂಬ್​ ದಾಳಿ ಮಾಡಿ ಅವುಗಳನ್ನು ಸ್ಫೋಟಿಸಿದ್ದಾರೆ ಎಂದು ಅದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ ಈ ಘಟನೆಯ ಬಗ್ಗೆ ಇಸ್ರೇಲ್ ಸೇನೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಾಜಾದಲ್ಲಿ ನಡೆದ ಸಂಘರ್ಷದಲ್ಲಿ 11 ಇಸ್ರೇಲಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ವರದಿ ಮಾಡಿದೆಯಾದರೂ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಕಳೆದ 48 ಗಂಟೆಗಳಲ್ಲಿ ಇಸ್ರೇಲ್ ಮಿಲಿಟರಿಯು 69 ಪ್ಯಾಲೆಸ್ಟೈನಿಯರನ್ನು ಕೊಂದು, 136 ಜನರನ್ನು ಗಾಯಗೊಳಿಸಿದೆ. 2023 ರ ಅಕ್ಟೋಬರ್ ಆರಂಭದಲ್ಲಿ ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಒಟ್ಟು ಮೃತರ ಸಂಖ್ಯೆ 40,074ಕ್ಕೆ ಮತ್ತು ಗಾಯಗೊಂಡವರ ಸಂಖ್ಯೆ 92,537 ಕ್ಕೆ ತಲುಪಿದೆ ಎಂದು ಗಾಜಾ ಮೂಲದ ಆರೋಗ್ಯ ಅಧಿಕಾರಿಗಳು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.