ಕಲಬುರಗಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ತಂತ್ರಜ್ಞಾನ ದಲ್ಲಿ ಕ್ರಾಂತಿ ಮಾಡಿದ ಮಹಾನ್ ನಾಯಕರಾಗಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮ ಲೋಕಾರ್ಪಣೆ ಮಾಡಿದೆ ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನೀಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಜೀವಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡುತ್ತಿದ್ದರು.
ಇಂದಿರಾಗಾಂಧಿ ಈ ದೇಶದ ಐಕ್ಯತೆಗೆ ತನ್ನ ಸ್ವಂತ ಜೀವವನ್ನೇ ತ್ಯಾಗ ಮಾಡಿದ ಮಹಾನ್ ನಾಯಕಿ. ಅವರ ಪುತ್ರ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಹಲವಾರು ಬದಲಾವಣೆ ತಂದರು. ದೇಶದ ನಾಗರಿಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು ಕೊಟ್ಟರು. ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ತಂದು ರಾಜಕೀಯ ವಿಕೇಂದ್ರಿಕರಣಕ್ಕೆ ಕಾರಣರಾದರು. ಪರಿಣಾಮ ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿ ಅಧಿಕಾರ ಅನುಭವಿಸುತ್ತಿದ್ದಾನೆ ಎಂದರು.
ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದ ಡಿಸಿಎಂ, ಸಚಿವ ಶರಣಪ್ರಕಾಶ್ ಪಾಟೀಲ ಅವರ ಕನಸಿನಂತೆ ಜಯದೇವ ಆಸ್ಪತ್ರೆಯಲ್ಲಿ 371 ಬೆಡ್ ಗಳ ಆಸ್ಪತ್ರೆ ಆಗುತ್ತಿದೆ. ಇದರು ಹೆಮ್ಮೆಯ ಸಂಗತಿ ಎಂದರು.
ತಾವು ಜಿಪಂ ನಿಂದಲೇ ಬಂದು ಈಗ ರಾಜ್ಯದ ಡಿಸಿಎಂ ಆಗಿದ್ದೇನೆ ಎಂದ ಶಿವಕುಮಾರ ಪಂಚಾಯತ್ ರಾಜ್ ಅಡಿಯಲ್ಲಿ ವಿಕೇಂದ್ರಿಕರಣವಾಗಿದ್ದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಅನುಕೂಲವಾಗಲು ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371 J ಜಾರಿಗೆ ತಂದರು. ಈ ಭಾಗ ರಾಜ್ಯದ ಬೇರೆ ಭಾಗಕ್ಕಿಂತಲೂ ಅಭಿವೃದ್ದಿ ಹೊಂದಲು ಸಹಕಾರಿಯಾಗುತ್ತಿದೆ. ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸ ಬೇಕಾಗಿತ್ತು. ಆದರೆ, ನಿಮ್ಮನ್ನೆಲ್ಲ ನೋಡಬೇಕೆಂದು ನಾನು ಇಂದು ಇಲ್ಲಿಗೆ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಮಾತನಾಡಿ ರಾಜ್ಯದ ಮಟ್ಟಿಗೆ ಇಂದು ಐತಿಹಾಸಿಕ ದಿನವಾಗಿದೆ. ದೇಶ ಕಂಡ ಮಹಾನ್ ನಾಯಕರಾದ ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜಯಂತಿ ಆಚರಿಸಲಾಗುತ್ತಿದೆ. ಅರಸು ಅವರು ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಇಂದು ರಾಷ್ಟ್ರಮಟ್ಟದಲ್ಲಿ ಬೆಳೆಯುವುದಕ್ಕೆ ಅರಸು ಅವರ ಆಶೀರ್ವಾದ ಕಾರಣವಾಗಿದೆ ಎಂದರು.
1992 ರಲ್ಲಿ ಪಂಚಾಯತ್ ರಾಜ್ ಕಾಯಿದೆಗೆ 73 ನೇ ತಿದ್ದು ಪಡಿ ತರುವ ಮೂಲಕ ಮೀಸಲಾತಿ ಜಾರಿಗೊಳಿಸಿ ಹಿಂದುಳಿದವರು ಹಾಗೂ ಸಮಾಜದಲ್ಲಿ ತಳ ಸಮುದಾಯವ ಜನರು ಕೂಡಾ ಪಂಚಾಯತ್ ಅಧ್ಯಕ್ಷರಾಗಲು ಅನುಕೂಲವಾಗಿದೆ. ಗಾಂಧೀಜಿಯವರ ಗ್ರಾಮಸ್ವರಾಜ್ ಕನಸನ್ನು ಈ ತಿದ್ದುಪಡಿಯ ಮೂಲಕ ರಾಜೀವ್ ಗಾಂಧಿ ನನಸು ಮಾಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಿಂದ ಬಹಳಷ್ಟು ಜನರು ನಾಯಕರಾಗಿ ಬೆಳೆದಿದ್ದಾರೆ. ಹಾಗಾಗಿ, ಪಂಚಾಯತ್ ರಾಜ್ ನಾಯಕರನ್ನು ಬೆಳೆಸುವ ಕಾರ್ಖಾನೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ಮಹತ್ವದ ದಿನದಂದು ಪಂಚಾಯತ್ ರಾಜ್ ರಾಜೀವ್ ಗಾಂಧಿ ಫೆಲೋಶಿಪ್ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಇಬ್ಬರು ಮಹನೀಯರ ಆಶಯದಂತೆ ಸಮಾಜದ ಕಟ್ಟಕಡೆಯ ಸಾಮಾನ್ಯ ನಾಗರಿಕರಿಗೆ ಸೌಲಭ್ಯ ಒಗದಗಿಸುತ್ತಿದ್ದೇವೆ. ಇದು ಹೆಮ್ಮೆಯ ಸಂಗತಿಯಾಗಿದೆ. ರಾಜೀವ್ ಗಾಂಧಿ ಅವರ ದೂರದೃಷ್ಟಿಯಿಂದಾಗಿ ರಾಜ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಇಂದು ಮಾಹಿತಿ ತಂತ್ರಜ್ಞಾನ ಕ್ರಾಂತಿಯಾಗಿದೆ. ಪರಿಣಾಮವಾಗಿ 4 ಲಕ್ಷ ಕೋಟಿ ಐಟಿ ಸರ್ವಿಸೆಸ್ ರಫ್ತಾಗಿದ್ದು ರಾಜ್ಯ ವಿಶ್ವದ ನಾಲ್ಕನೆಯ ಅತಿದೊಡ್ಡ ಕ್ಲಸ್ಟರ್ ಆಗಿ ಹೊರಹೊಮ್ಮಿದೆ ಎಂದರು.
ಸಮೃದ್ದ, ಸಶಕ್ತ ಹಾಗೂ ಪ್ರಬುದ್ಧ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲ ನಮ್ಮೊಂದಿಗೆ ಕೈಜೋಡಿಸಿ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಉಮಾಮಹಾದೇವನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯಿದೆ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಅಂದಿನಿಂದ ಇಲಾಖೆ ಗ್ರಾಮೀಣಾಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ. 2010 ರಲ್ಲಿ ಕಾಯಿದೆಗೆ ತಿದ್ದಪಡಿ ತಂದು ಶೇ 50% ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಇದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ ಎಂದರು.
ಪಂಚಾಯತ್ ರಾಜ್ ಬಲವರ್ಧನೆಗೆ ರಾಜೀವ್ ಗಾಂಧಿ ಫೆಲೋಶಿಪ್ ಅಡಿಯಲ್ಲಿ ನೇಮಕವಾದ ಫೆಲೋಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.
ಶಾಸಕ ಅಲ್ಲಮಪ್ರಭು ಮಾತನಾಡಿ ದೇವರಾಜ್ ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದು ಮೀಸಲಾತಿ ಜಾರಿಗೊಳಿಸಿದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಸಿಗುವಂತಾಗಿದೆ ಎಂದರು. ಸಚಿವ ಪ್ರಿಯಾಂಕ್ ಖರ್ಗೆ ಅವರ ಅವಿರತ ಶ್ರಮದಿಂದಾಗಿ ರಾಜ್ಯದಲ್ಲಿ ನೂತನ ಯೋಜನೆಗಳು ಜಾರಿಗೊಳ್ಳುತ್ತಿವೆ. ಅವುಗಳ ಲಾಭ ಎಲ್ಲರೂ ಪಡೆದುಕೊಳ್ಳಬೇಕಿದೆ ಎಂದರು.
ಸಚಿವ ಶರಣ ಪ್ರಕಾಶ ಪಾಟೀಲ ಮಾತನಾಡಿ, ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರಬೇಕು ಎನ್ನುವುದು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಆದ್ದರಿಂದ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ನೆನಪಿನಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಲೋಕಾರ್ಪಣೆಗೊಳ್ಳುತ್ತಿದೆ. ರಾಜೀವ್ ಗಾಂಧಿ ಅವರು ತಂದ ಬದಲಾವಣೆಗಳು ಜನರ ಮೇಲೆ ಭಾರಿ ಪರಿಣಾಮ ಬೀರಿವೆ. ಪಕ್ಷಾಂತರಿ ನಿಷೇಧ ಕಾನೂನು (ಆ್ಯಂಟಿ ಡಿಫೆಕ್ಷನ್ ಕಾನೂನು ) ಜಾರಿಗೆ ತಂದರು. ಮಾಹಿತಿ ತಂತ್ರಜ್ಞಾನಕ್ಕೆ ಅವರು ನೀಡಿದ ಪ್ರೋತ್ಸಾಹದಿಂದಾಗಿ ಇಂದು ಬೆಂಗಳೂರು ತಂತ್ರಜ್ಞಾನದಲ್ಲಿ ಹೆಸರು ಮಾಡಿದೆ. ಅಧಿಕಾರ ವಿಕೇಂದ್ರೀಕರಣ ದಂತ ಮಹಾನ್ ಬದಲಾವಣೆಗೆ ಅವರು ಕೈ ಹಾಕಿದರು. ಪಂಚಾಯತ್ ರಾಜ್ ಗೆ ತಿದ್ದುಪಡಿ ತಂದು ಸಂವಿಧಾನಿಕ ಮಹತ್ವ ತಂದು ಕೊಟ್ಟಿದ್ದಾರೆ. ಪರಿಣಾಮವಾಗಿ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಸಹಕಾರಿಯಾಗಿದೆ.ಹಾಗಾಗಿ, ಕಾಂಗ್ರೆಸ್ ಪಕ್ಷ ರಾಜೀವ್ ಗಾಂಧಿ ಅವರ ಕನಸಿನಂತೆ ನಡೆದುಕೊಳ್ಳುತ್ತಿದೆ. ಎಂದರು.
ವೇದಿಕೆಯ ಮೇಲೆ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಎಂ ವೈ ಪಾಟೀಲ, ಎಂ ಎಲ್ ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ವಿ.ವಸಂತಕುಮಾರ, ಚಂದ್ರಶೇಖರ್ ಪಾಟೀಲ, ಜಗದೇವ ಗುತ್ತೇದಾರ, ಮಹಾಪೌರ ಯಲ್ಲಪ್ಪ ನಾಯಕೋಡಿ, ಮಜರ್ ಆಲಂಖಾನ್, ಪ್ರಾದೇಶಿಕ ಆಯುಕ್ತ ಕೃಷ್ಣ ವಾಜಪೇಯಿ, ಕೆಕೆಆರ್ ಡಿ ಬಿ ಕಾರ್ಯದರ್ಶಿ ಸುಂದರೇಶ್ ಬಾಬು, ಐಜಿ ಅಜಯ್ ಹಿಲೋರಿ, ಪಂಚಾಯತ್ ರಾಜ್ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಲವರಿದ್ದರು.