ಮನೆ ರಾಜಕೀಯ ನಾರಾಯಣ ಗುರುಗಳು ಪ್ರತಿಪಾದಿಸಿದ ಮನುಷ್ಯತ್ವದಿಂದ ಕೂಡಿದ ಸಮಾಜ ನಿರ್ಮಾಣ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಾರಾಯಣ ಗುರುಗಳು ಪ್ರತಿಪಾದಿಸಿದ ಮನುಷ್ಯತ್ವದಿಂದ ಕೂಡಿದ ಸಮಾಜ ನಿರ್ಮಾಣ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅವರು ಪ್ರತಿಪಾದಿಸಿದಂತೆ ಎಲ್ಲರೂ ಮನುಷ್ಯರಾಗಿ ಗೌರವದಿಂದ ಬದುಕುವಂತಹ ಸಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

Join Our Whatsapp Group

ಅವರು ಮಂಗಳವಾರ ರವೀಂದ್ರಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಿ, ಸಾಮಾಜಿಕ ನ್ಯಾಯದ ಪರವಾದ ಸಮಾಜ ನಿರ್ಮಾಣಕ್ಕೆ ನಾವು ಬದ್ದರಾಗಿದ್ದೇವೆ. ಮನುಷ್ಯರಲ್ಲಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣ ಗುರುಗಳು ಹೇಳಿದರು. ಅದರಂತೆ ಪ್ರತಿಯೊಬ್ಬರೂ ಅನುಸರಿಸಿ ಬಾಳಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.

ನಾರಾಯಣ ಗುರು ಅವರು ಈಡಿಗ ಜನಾಂಗದಲ್ಲಿ ಜನಿಸಿದ್ದರೂ, ಯಾವುದೇ ಧರ್ಮ, ಜಾತಿ, ಭಾಷೆಗೆ ಸೀಮಿತರಾಗಿದ್ದವರಲ್ಲ. ಅವರು ಬುದ್ಧ, ಬಸವ, ಕನಕದಾಸ ರೀತಿಯ ಸಂತರು. ಸಮಾಜದಲ್ಲಿ ಸುಧಾರಣೆ ಬಯಸಿ ಅದಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸಲಾಗುತ್ತಿದೆ.

ಸಮಾಜದಲ್ಲಿ ಕೆಲವು ಪಟ್ಟಭದ್ರರು ಹಿತಾಸಕ್ತಿಗಳು ಮೇಲ್ವರ್ಗ, ಕೆಳ ವರ್ಗ ಎಂದು ವರ್ಗೀಕರಣ ಮಾಡಿ ಬಹಳ ಹಿಂದೆಯೇ ವರ್ಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಶೂದ್ರರಿಗೆ ಆಸ್ತಿ ಉತ್ಪಾದನೆ ಮಾಡುವುದು ಬಿಟ್ಟರೆ, ಆಸ್ತಿಯ ಮೇಲೆ ಯಾವುದೇ ಹಕ್ಕು ಇರಲಿಲ್ಲ.ಅವರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಹಿನ್ನಲೆಯಲ್ಲಿ ಅವಕಾಶಗಳಿಂದಲೂ ವಂಚಿತರಾದರು.

ನಾರಾಯಣ ಗುರು ಅವರು ಶಿಕ್ಷಣದಿಂದ ಮಾತ್ರ ಈ ಸಂಕೋಲೆಗಳಿಂದ ಸ್ವತಂತ್ರರಾಗಲು ಸಾಧ್ಯ ಎಂದು ಬಲವಾಗಿ ನಂಬಿದ್ದರು. ಸ್ವತಂತ್ರವಾದ ಆಲೋಚನೆ, ಚಿಂತನೆ ಬರಬೇಕಾದರೆ ವಿದ್ಯೆ ಕಲಿಯಲೇ ಬೇಕು. ವಿದ್ಯೆ ಇಲ್ಲದಿದ್ದರೆ ಸ್ವಾಭಿಮಾನ ಕೂಡಾ ಇರುವುದಿಲ್ಲ.ಗುಲಾಮಗಿರಿ ಮನೆ ಮಾಡಿಕೊಂಡಿರುತ್ತದೆ.

ಅವಕಾಶ ಸಿಕ್ಕಿದರೆ ಪ್ರತಿಯೊಬ್ಬರೂ ವಿದ್ಯಾವಂತರಾಗುತ್ತಾರೆ. ವಿದ್ಯೆಗೆ ಯಾವುದೇ ಜಾತಿಯಿಲ್ಲ. ಅಂಬೇಡ್ಕರ್‌, ವಾಲ್ಮಿಕಿ, ವ್ಯಾಸ, ಕಾಳಿದಾಸ ಇದಕ್ಕೆ ಉದಾಹರಣೆ. ನಾರಾಯಣ ಗುರುಗಳು ತಮ್ಮ ನಡವಳಿಕೆಯಿಂದ, ಕಲಿತ ವಿದ್ಯೆಯಿಂದ ಸಂತರಾಗಿ ಬೆಳೆದರು.

ಸ್ವಾತಂತ್ರ್ಯ ಬಂದು 77 ವರ್ಷವಾದರೂ, ಇಂದಿನವರೆಗೂ ಎಲ್ಲರೂ ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ಇನ್ನೂ 25 ಶೇಕಡಾ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಕ್ರಿಶ್ಚಿಯನ್‌ ಮಿಷನರಿಗಳ ಕಾರಣದಿಂದ ಕರಾವಳಿಯಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಾಗಿದೆ.

ಎಷ್ಟೆ ಕಷ್ಟ ಬಂದರೂ ನಾವು ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಇದುವೇ ನಾರಾಯಣ ಗುರುವಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.

ಯಾವ ಜಾತಿ ವ್ಯವಸ್ಥೆಯೂ ಇಲ್ಲದೆ, ಮನುಷ್ಯರಾಗಿ ಬಾಳಿ ಎಂದು ನಾರಾಯಣ ಗುರು ಅವರು ಬೋಧಿಸಿದರು. ಜಾತಿ ಆಧಾರದಲ್ಲಿ ತುಚ್ಛವಾಗಿ ಕಾಣುವ ಮನೋಭಾವ ಹೋಗಬೇಕು. ಯಾವ ಜಾತಿಯಲ್ಲಿ ಹುಟ್ಟಿದ್ದರೂ ಗೌರವ ನೀಡಬೇಕು.

ಇಂದು ಅನೇಕ ವಿದ್ಯಾವಂತರು ಕೂಡಾ ಗುಲಾಮಗಿರಿಯಿಂದ ಹೊರ ಬರಲು ಇನ್ನೂ ಸಾಧ್ಯವಾಗದಿರುವುದು ವಿಷಾದನೀಯ.

ಶೂದ್ರರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಅದರ ವಿರುದ್ಧ ಸಂಘರ್ಷಕ್ಕಿಳಿಯದೆ, ನಾರಾಯಣ ಗುರು ಅವರು ಅವರದ್ದೇ ಆದ ದೇವಾಲಯ ನಿರ್ಮಿಸಲು ಹಾಗೂ ಅರ್ಚಕರನ್ನು ನೇಮಿಸಲು ಕರೆ ನೀಡಿದರು.ಈ ರೀತಿ ಕೇರಳದಲ್ಲಿ 60ಕ್ಕೂ ಅಧಿಕ ದೇವಾಲಯ ಕಟ್ಟಿದರು. ಕರಾವಳಿಯಲ್ಲೂ ದೇವಾಲಯಗಳನ್ನು ನಿರ್ಮಿಸಿದರು. ಪ್ರವೇಶ ನಿರಾಕರಿಸುವ ದೇವಾಲಯಗಳಿಗೆ ಹೋಗಲೇ ಬೇಡಿ ಎಂದು ಹೇಳಿ ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮವನ್ನು ಪ್ರತಿಪಾದಿಸಿದರು.

ನಾರಾಯಣ ಗುರುಗಳು ಮೌಡ್ಯ, ಕಂದಾಚಾರಗಳ ವಿರುದ್ಧ ಬಸವಾದಿ ಶರಣರ ರೀತಿಯಲ್ಲಿ ಜಾಗೃತಿ ಮೂಡಿಸಿದರು. ಇಂದು ನಾವು ವಿದ್ಯಾವಂತರಾದರೂ ಮೌಡ್ಯಗಳನ್ನು ಬಿಟ್ಟಿಲ್ಲ. ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಲು ಪ್ರಯತ್ನವೇ ಮಾಡಿಲ್ಲ. ಏನಾದರೂ ಕಷ್ಟ ಬಂದ ತಕ್ಷಣ ಮೌಡ್ಯಗಳಿಗೆ ಶರಣಾಗುತ್ತೇವೆ. ತಮ್ಮ ಸಂಕಷ್ಟಗಳಿಗೂ ಕರ್ಮ ಸಿದ್ದಾಂತದ ಕಾರಣ ಹೇಳುತ್ತೇವೆ. ಸಂಕಷ್ಟ ಬಂದಾಗ ಹಣೆಯಲ್ಲಿ ಬರೆದದ್ದು, ಹಿಂದಿನ ಜನ್ಮದ ಕರ್ಮ ಎಂದು ಹೇಳುವುದು ಸರಿಯಲ್ಲ. ಅದೆಲ್ಲಾ ಸುಳ್ಳು. ಮೌಡ್ಯ, ಗೊಡ್ಡು ಸಂಪ್ರದಾಯ, ಕಂದಾಚಾರಗಳನ್ನು ನಂಬಬೇಡಿ. ನಾರಾಯಾಣ ಗುರು, ಬಸವಣ್ಣ ಹೇಳಿದ ರೀತಿ ನಡೆಯಿರಿ. ಕರ್ಮ ಸಿದ್ಧಾಂತದ ವಿರುದ್ಧ ಬಸವಾದಿ ಶರಣರೂ ಬೋಧನೆ ಮಾಡಿದರು. ಆದ್ದರಿಂದಲೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಿಸಿದ್ದೇವೆ.

ಕುವೆಂಪು ಅವರು, ಹುಟ್ಟುತ್ತಾ ಪ್ರತಿ ಮಗು ಕೂಡಾ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ಆದರೆ ಹಾಗೆ ಆಗಬಾರದು. ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಎಂದು ಹೇಳಿದ್ದಾರೆ.

ಈಡಿಗರ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ ಶಿಥಿಲವಾಗಿದ್ದು, ಅದರ ನವೀಕರಣಕ್ಕೆ ಅನುದಾನ ಒದಗಿಸಲಾಗುವುದು. ಈಡಿಗರ ಸಮುದಾಯ ಭವನಕ್ಕೂ ಅನುದಾನ ನೀಡಲಾಗುವುದು. ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.